Home ಟಾಪ್ ಸುದ್ದಿಗಳು ಹರ್ಷ ಕೊಲೆ: ಹಳೆಯ ದ್ವೇಷವೇ ಕೊಲೆಗೆ ಕಾರಣ, ವಿಡಿಯೋ ಕಾಲ್‌ ಮಾಡಿದ ಯುವತಿಯ ಯಾವುದೇ ಪಾತ್ರವಿಲ್ಲ...

ಹರ್ಷ ಕೊಲೆ: ಹಳೆಯ ದ್ವೇಷವೇ ಕೊಲೆಗೆ ಕಾರಣ, ವಿಡಿಯೋ ಕಾಲ್‌ ಮಾಡಿದ ಯುವತಿಯ ಯಾವುದೇ ಪಾತ್ರವಿಲ್ಲ ಎಂದ ಪೊಲೀಸರು

ಶಿವಮೊಗ್ಗ: ಶಿವಮೊಗ್ಗದ ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಗೆ ಮುನ್ನ ಹಿಂದೂ ಹುಡುಗಿಯೊಬ್ಬಳು ಹರ್ಷ ಮೊಬೈಲ್‌ಗೆ ವಿಡಿಯೋ ಕಾಲ್ ಮಾಡಿದ್ದಳು. ಆಕೆ ಹರ್ಷನ ಸ್ನೇಹಿತೆಯಾಗಿದ್ದು, ನೆರೆಹೊರೆಯಲ್ಲೇ ವಾಸವಾಗಿದ್ದಳು. ಆಕೆಗೂ ಕೊಲೆಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿ ಆಗಿರುವ ಆಕೆ ಫೆಬ್ರವರಿ 20ರಂದು ಹರ್ಷ ಕೊಲೆಯಾಗುವ ಕೆಲವೇ ನಿಮಿಷಗಳ ಹಿಂದೆ ಆಕೆ ಹರ್ಷಗೆ ವಿಡಿಯೋ ಕಾಲ್ ಮಾಡಿದ್ದಳು. ಸದಾ ಸಕ್ರಿಯವಾಗಿದ್ದ ಹರ್ಷ, ಆತನ ಸಂಘಟನಾ ಕೆಲಸಗಳ ಬಗ್ಗೆ ವಿದ್ಯಾರ್ಥಿನಿಗೆ ಗೊತ್ತಿತ್ತು. ಆದ್ದರಿಂದ ಅವರು ಸ್ನೇಹಿತರಾಗಿದ್ದರು. ವಿದ್ಯಾರ್ಥಿನಿ ಜೊತೆ ಮಾತನಾಡಿದ ಬಳಿಕ ಸ್ನೇಹಿತನ ಜೊತೆ ಮಾತನಾಡುತ್ತಾ ಹೋಗುತ್ತಿದ್ದಾಗ ಹರ್ಷ ಮೇಲೆ ಹಲ್ಲೆಯಾಗಿತ್ತು. ವಿಡಿಯೋ ಕಾಲ್ ಜಾಡು ಹಿಡಿದ ಪೊಲೀಸರು ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಆಕೆಯನ್ನು ವಿಚಾರಣೆ ನಡೆಸಿದ್ದರು. ಹರ್ಷ ಕೊಲೆ ಬಗ್ಗೆ ಮಾಹಿತಿ ತಿಳಿದ ಯುವತಿ ಆತಂಕಗೊಂಡಿದ್ದಳು. ಆಕೆಯೇ ಸ್ವಯಂ ಪ್ರೇರಿತವಾಗಿ ಪೊಲೀಸರಿಗೆ ಕರೆ ಮಾಡಿ ಹರ್ಷನಿಗೆ ವಿಡಿಯೋ ಕಾಲ್ ಮಾಡಿದ ಮಾಹಿತಿ ತಿಳಿಸಿದ್ದಳು. ಸ್ನೇಹಿತರ ಮೂಲಕ ಹರ್ಷ ನಂಬರ್ ಪಡೆದಿದ್ದೆ ಎಂದು ಹೇಳಿಕೆ ಕೊಟ್ಟಿದ್ದಳು.

ಹರ್ಷ ಕೊಲೆಗೆ ಮೂವರು ಆರೋಪಿಗಳು ಹೊಂದಿದ್ದ ಹಳೇ ದ್ವೇಷವೇ ಕಾರಣ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಈ ಆರೋಪಿಗಳಿಗೆ ಬೇರೆ ಸಂಘಟನೆ, ವ್ಯಕ್ತಿಗಳ ಜೊತೆ ಸಂಪರ್ಕವಿಲ್ಲ ಎಂಬುದು ತಿಳಿದು ಬಂದಿದೆ. ಆರೋಪಿಗಳು ಹರ್ಷನಂತೆಯೇ ಮನೆಗೆ, ಸಮಾಜಕ್ಕೆ ಯಾವುದೇ ಪ್ರಯೋಜನಕ್ಕಾಗದೇ ರೌಡಿಸಂ ತಲೆಗೆ ಹತ್ತಿಸಿಕೊಂಡ ಪುಂಡರಾಗಿದ್ದರು ಎಂದು ತಿಳಿದು ಬಂದಿದೆ. ಹರ್ಷ ಕೊಲೆ ಪ್ರಕರಣದ ಮೂವರು ಆರೋಪಿಗಳು ಅದರಲ್ಲೂ ಪ್ರಮುಖ ಆರೋಪಿ ಮುಹಮ್ಮದ್ ಖಾಸಿಫ್ ಹರ್ಷ ಜೊತೆ ಕಳೆದ ಮೂರು ವರ್ಷಗಳಿಂದ ಹಲವು ವಿಚಾರಕ್ಕೆ ಜಗಳವಾಡಿದ್ದನು. ಹರ್ಷ ಕೊಲೆಗೆ ಆತನೇ ಸಂಚು ರೂಪಿಸಿದ್ದಾನೆ. ಕ್ಲಾರ್ಕ್ ಪೇಟ್ ನಿವಾಸಿ ಮುಹಮ್ಮದ್ ಖಾಸಿಫ್ ಮತ್ತು ಪಕ್ಕದ ಸೀಗೆಹಟ್ಟಿ ನಿವಾಸಿ ಹರ್ಷ ಆಗಾಗ ಜಗಳವಾಡುತ್ತಿದ್ದರು. ಅದರಲ್ಲೂ ಇಸ್ಲಾಂ ಕುರಿತು ಹರ್ಷ ಹಾಕಿದ್ದ ಫೇಸ್‌ಬುಕ್ ಪೋಸ್ಟ್‌ ವಿಚಾರದಲ್ಲಿ ಇಬ್ಬರ ನಡುವೆ ಜಗಳ ನಡೆದಿತ್ತು.

ಒಮ್ಮೆ ಸೀಗೆಹಟ್ಟಿ ಮೂಲಕ ಬೈಕ್‌ನಲ್ಲಿ ಸಾಗುವಾಗ ಹರ್ಷನನ್ನು ನೋಡಿ ಮೊಹಮ್ಮದ್ ಖಾಸಿಫ್ ನೆಲಕ್ಕೆ ಉಗುಳಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಹೊಡೆದಾಟ ನಡೆದಿತ್ತು. ಈ ಮಾದರಿ ಗಲಾಟೆಗಳು ಆಗಾಗ ನಡೆಯುತ್ತಿದ್ದವು. ಕಳೆದ ಒಂದು ವರ್ಷದಿಂದಲೇ ಹರ್ಷ ಹತ್ಯೆಗೆ ಮುಹಮ್ಮದ್ ಖಾಸಿಫ್ ಯೋಜನೆ ರೂಪಿಸುತ್ತಿದ್ದ. ಆರೋಪಿಗಳು ಗಾಂಜಾ ಸೇವಿಸುತ್ತಿದ್ದರು. ಕೆಲವು ಆರೋಪಿಗಳು ಹಲವು ಪ್ರಕರಣಗಳಲ್ಲಿ ಜೈಲು ವಾಸ ಸಹ ಅನುಭವಿಸಿದ್ದರು.

ಮುಹಮ್ಮದ್ ಖಾಸಿಫ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಕೊಲೆ ಸಂಚನ್ನು ಇತರ ಆರೋಪಿಗಳ ಜೊತೆ ಸೇರಿ ಆತನೇ ರೂಪಿಸಿದ್ದಾನೆ. ಕೊಲೆ ನಡೆದ ಎರಡು ದಿನದಲ್ಲಿಯೇ ಪೊಲೀಸರು ಖಾಸಿಫ್ ನನ್ನು ಬಂಧಿಸಿದ್ದರು. ಹರ್ಷ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಹತ್ಯೆಗೆ ಬಳಕೆ ಮಾಡಿದ್ದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾರಿನಲ್ಲಿ ಆರು ಜನರು ಹರ್ಷ ಹತ್ಯೆ ಮಾಡಲು ಆಗಮಿಸಿದ್ದರು ಎಂಬ ಮಾಹಿತಿ ಇದೆ. ಈ ಕಾರಿನ ಡೀಲರ್ ಬದ್ರುದ್ದೀನ್ ಪುತ್ರ ಜಿಲಾನ್ ಸಹ ಕಾರಿನಲ್ಲಿದ್ದ. ಆದರೆ ಜಿಲಾನ್‌ಗೂ ಹರ್ಷನಿಗೂ ಯಾವುದೇ ದ್ವೇಷವಿರಲಿಲ್ಲ. ಸಂಜೆ 4 ಗಂಟೆಗೆ ಶಿವಮೊಗ್ಗಕ್ಕೆ ಕಾರು ಬಂದಿತ್ತು. ಜಿಲಾನ್ ಜೊತೆ ನಗರದಲ್ಲಿ ರಾತ್ರಿ 8.30ರ ತನಕ ಆರೋಪಿಗಳು ಸುತ್ತಾಡಿದ್ದರು. ಬಳಿಕ 8.45ರ ಸುಮಾರಿಗೆ ಕೊಲೆ ನಡೆದ ಜಾಗಕ್ಕೆ ಆಗಮಿಸಿದ್ದರು. ಹತ್ಯೆಯ ಬಳಿಕ ಇದೇ ಕಾರಿನಲ್ಲಿ ಭದ್ರಾವತಿಗೆ ಹಂತಕರು ಪರಾರಿಯಾಗಿದ್ದರು. ಬಳಿಕ ಭದ್ರಾವತಿ ರೈಲು ನಿಲ್ದಾಣದಿಂದ ಕೆಲವರು ಬೆಂಗಳೂರಿಗೆ, ಕೆಲವರು ಮೈಸೂರು ಕಡೆಗೆ ಸಾಗಿದ್ದರು.

Join Whatsapp
Exit mobile version