ಮಂಗಳೂರು: ರಾಜ್ಯ ಗೃಹಸಚಿವ ಜಿ ಪರಮೇಶ್ವರ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ಶಾಂತಿ ಸಭೆಗೆ ಜಿಲ್ಲೆಯ ಬಹುತೇಕ ಮುಖಂಡರು, ವಿವಿಧ ಪಕ್ಷಗಳ ನಾಯಕರು ಪಾಲ್ಗೊಂಡು ಜಿಲ್ಲೆಯ ಶಾಂತಿ ಸ್ಥಾಪನೆ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಭೆಯ ಮುಂದೆ ತಮ್ಮ ದೈನಂದಿನ ಚಾಳಿಯಂತೆ ಕೋಮುವಾದದ ಪಾಠ ಮಾಡಿರುವುದು ಖಂಡನೀಯ ಎಂದು ಎಸ್ ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಜಲೀಲ್ ಕೆ ಹೇಳಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶಾಸಕ ಹರೀಶ್ ಪೂಂಜಾ ಮಾತನಾಡಿ ಪ್ರಚೋದನಕಾರಿ ಭಾಷಣದಿಂದ ಕೋಮು ಗಲಭೆ ನಡೆಯಲ್ಲ, ಬದಲಾಗಿ ಹಿಂದುಗಳ ಭಾವಣೆಗಳಿಗೆ ಘಾಸಿಯಾದರೆ ಮಾತ್ರ ಇಲ್ಲಿ ಅಶಾಂತಿ ಉಂಟಾಗುತ್ತದೆ ಮತ್ತು ಹಿಂದು ಯುವತಿಯರ ತಂಟೆಗೆ ಬಂದರೆ ಕೋಮು ಸಂಘರ್ಷಗಳು ನಡೆಯುತ್ತದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಅಲ್ಲದೇ ಯಾವುದೇ ಕೊಲೆ ಗಲಭೆಗಳು ಯಾವುದೇ ಷಡ್ಯಂತರ, ಅಥವಾ ಪೂರ್ವಯೋಜಿತವಾಗಿ ನಡದಿಲ್ಲ ಎಲ್ಲವೂ ಭಾವನೆಗಳ ವಿಚಾರದಲ್ಲಿ ನಡೆದಿದೆ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿಗೆ ಅಶ್ರಫ್ ಮತ್ತು ರಹಿಮಾನ್ ಎನ್ನುವ ಇಬ್ಬರು ಅಮಾಕರ ಮುಸ್ಲಿಮರ ಕೊಲೆಗಳು ನಡೆದಿದೆ. ಈ ಕೊಲೆಗಳ ಹಿಂದೆ ಸಂಘಪರಿವಾರ ಹಾಗೂ ಬಿಜೆಪಿ ನಾಯಕರೂ ಶಾಮೀಲಾಗಿದ್ದಾರೆ ಎನ್ನುವ ಆರೋಪಗಳು ನಿರಂತರವಾಗಿ ಕೇಳಿ ಬರುತ್ತಿವೆ. ಹೀಗಿರುವಾಗ ಶಾಸಕ ಹರೀಶ್ ಪೂಂಜಾ ಈ ರೀತಿಯ ಹೇಳಿಕೆ ಕೊಟ್ಟು ಪ್ರಕರಣದ ತನಿಖೆಯ ದಿಕ್ಕನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರಕರಣ ತನಿಖೆ ನಡೆಯುತ್ತಿರುವಾಗ ಹೀಗೆ ತೀರ್ಪು ನೀಡಲು ಹರೀಶ್ ಪೂಂಜಾ ಯಾರು ಎಂದು ಜಲೀಲ್ ಕೆ ಪ್ರಶ್ನಿಸಿದ್ದಾರೆ.
ಇದೇ ಹರೀಶ್ ಪೂಂಜಾ ರೌಡಿ ಶೀಟರ್ ಹತ್ಯೆ ಆದಾಗ ಮುಸ್ಲಿಮರ ಮತ್ತು ಮುಸ್ಲಿಂ ಸಂಘಟನೆಗಳ ಮೇಲೆ ಆರೋಪ ಮಾಡಿದ್ದರು ಅಲ್ಲದೇ ಇದೊಂದು ಪೂರ್ವಯೋಜಿತ ಹತ್ಯೆ, ಇದರ ಹಿಂದೆ ಜಿಹಾದಿ ಷಡ್ಯಂತರ ಇದೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದರು. ಹಾಗಾಗಿ ಇವರು ಶಾಂತಿ ಸಭೆಯಲ್ಲಿ ಹೇಳಿದ ಮಾತುಗಳು ಮತ್ತು ಕೊಲೆ ನಡೆದಾಗ ಕೊಟ್ಟ ಹೇಳಿಕೆಗಳು ದ್ವಂದ್ವದಿಂದ ಕೂಡಿರುತ್ತದೆ ಎಂದು ಎಸ್ ಡಿ ಪಿ ಐ ನಗರ ಜಿಲ್ಲಾಧ್ಯಕ್ಷರಾದ ಜಲೀಲ್ ಕೆ ಆರೋಪಿಸಿದ್ದಾರೆ.
ಅಲ್ಲದೇ ಸಭೆಯಲ್ಲಿ ಮುಂದಕ್ಕೆ ನಡೆಯುವ ಗಣೇಶ ಹಬ್ಬದಲ್ಲಿ ಸರಕಾರಿ ಕಾಲೇಜುಗಳಲ್ಲಿ ಗಣೇಶ ಕೂರಿಸಲು ಅವಕಾಶ ಕೊಡಬೇಕು ಇಲ್ಲದಿದ್ದರೆ ಹಿಂದುಗಳ ಭಾವಣೆಗೆ ಧಕ್ಕೆ ಆಗುತ್ತದೆ ಎಂದು ಪರೋಕ್ಷವಾಗಿ ಮತ್ತೊಂದು ವಿವಾದ ಉಂಟುಮಾಡುವ ಸೂಚನೆ ನೀಡಿದ್ದಾರೆ. ಕಳೆದ ವರ್ಷ ಸರಕಾರಿ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆ ಬೇಡ ಎಂಬ ಆದೇಶ ಇದ್ದರೂ ಅದರ ಸ್ಪಷ್ಟ ಉಲ್ಲಂಘನೆ ಮಾಡುವ ಉದ್ದೇಶ ಇವರ ಮಾತಿನಲ್ಲಿ ಕಾಣುತ್ತಿದೆ.
ಶಾಂತಿ ಸಭೆಗಳಲ್ಲಿ ಎಲ್ಲರೂ ಜಿಲ್ಲೆಯನ್ನು ಮತ್ತೊಮ್ಮೆ ಸೌಹಾರ್ದದತೆಯ ಕಡೆಗೆ ಕೊಂಡೊಯ್ಯುವ ಚರ್ಚೆ, ಅಭಿಪ್ರಾಯ ವ್ಯಕ್ತಪಡಿಸಿದರೆ, ತಮ್ಮ ಸಿದ್ದಾಂತಕ್ಕೊಸ್ಕರ ಮತ್ತು ಸಂಘಪರಿವಾರದ ಹಿಂದುಗಳನ್ನು ಓಲೈಸಲು ಈ ರೀತಿಯ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಈ ಹಿಂದೆ ನನಗೆ ಮುಸಲ್ಮಾನರ ಮತವೇ ಬೇಡ, ನಾನು ಮೊದಲು ಹಿಂದುಗಳಿಗೆ ಕೆಲಸ ಮಾಡುವ ಶಾಸಕ ಎಂದು ಹರೀಶ್ ಪೂಂಜಾ ಬಹಿರಂಗವಾಗಿ ಹೇಳಿಕೆ ನೀಡಿದ್ದರು ಇಂದು ಅದೇ ಸಂಪ್ರದಾಯವನ್ನು ಶಾಂತಿ ಸಭೆಯಲ್ಲೂ ಪ್ರತಿಪಾದಿಸಿದ್ದಾರೆ.
ದ್ವೇಷ ಭಾಷಣಗಳ ಮೂಲಕ ದ.ಕ ಜಿಲ್ಲೆಯ ಶಾಂತಿಯನ್ನು ಕದಡುತ್ತಿರುವ ಪ್ರಮುಖರಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಕೂಡ ಒಬ್ಬರು. ಶಾಂತಿ ಸಭೆಯಲ್ಲಿ ಅವರು ಅದನ್ನೇ ಮುಂದುವರೆಸಿದ್ದಾರೆ. ಇಂತವರ ವಿರುದ್ದ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಎಸ್ ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಜಲೀಲ್ ಕೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
