ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಮಾಡುವ ಕೇಂದ್ರ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಗುರುವಾರ ಕೈಗೆತ್ತಿಕೊಂಡಿದೆ.
ಬಿಹಾರದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಆಧಾರ್ ಕಾರ್ಡ್ ಅನ್ನು ಏಕೆ ಪರಿಗಣಿಸುತ್ತಿಲ್ಲ ಎಂದು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠವು ಚುನಾವಣಾ ಆಯೋಗವನ್ನು ಪ್ರಶ್ನಿಸಿತು.
ಈ ಕುರಿತು ಚುನಾವಣಾ ಆಯೋಗದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ರಾಕೇಶ್ ದ್ವಿವೇದಿ, ‘ಆಧಾರ್ ಕಾರ್ಡ್ ಅನ್ನು ಪೌರತ್ವಕ್ಕೆ ಪುರಾವೆಯಾಗಿ ಪರಿಗಣಿಸುತ್ತಿಲ್ಲ. ಹಾಗೆಯೇ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಆಕ್ಷೇಪಣೆ ಹೊಂದಿರುವುದಾಗಿ’ ತಿಳಿಸಿದ್ದಾರೆ.
ರಾಕೇಶ್ ದ್ವಿವೇದಿ ಜತೆಗೆ, ಹಿರಿಯ ವಕೀಲರಾದ ಕೆ.ಕೆ.ವೇಣುಗೋಪಾಲ್ ಮತ್ತು ಮಣಿಂದರ್ ಸಿಂಗ್ ಅವರು ಚುನಾವಣಾ ಆಯೋಗದ ಪರವಾಗಿ ವಾದ ಮಂಡಿಸಲಿದ್ದಾರೆ.
ಅರ್ಜಿದಾರರೊಬ್ಬರ ಪರ ಹಾಜರಿದ್ದ ಹಿರಿಯ ವಕೀಲ ಗೋಪಾಲ ಶಂಕರನಾರಾಯಣ, ‘ಬಿಹಾರದಲ್ಲಿ ಸುಮಾರು 8 ಕೋಟಿ ಮತದಾರರಿದ್ದಾರೆ. ಮತದಾರರ ಪಟ್ಟಿಯ ಪರಿಷ್ಕರಣೆಗೆ ಜನತಾ ಪ್ರಾತಿನಿಧ್ಯ ಕಾಯ್ದೆಯಡಿಯಲ್ಲಿ ಅನುಮತಿ ನೀಡಬಹುದಿತ್ತು. ಸದ್ಯ ಚುನಾವಣಾ ಆಯೋಗದ ಅಧಿಕಾರಿಗಳು ಆಧಾರ್ ಕಾರ್ಡ್ ಮತ್ತು ಮತದಾರ ಗುರುತಿನ ಚೀಟಿಯನ್ನು ದಾಖಲೆಯಾಗಿ ಸ್ವೀಕರಿಸುತ್ತಿಲ್ಲ’ ಎಂದಿದ್ದಾರೆ.
