Home ಟಾಪ್ ಸುದ್ದಿಗಳು ನಿಮ್ಮ ಸೇವೆಗೆ ದೇವರು ನನ್ನನ್ನು ಕಳುಹಿಸಿದ್ದಾನೆ: ಮೋದಿಗೆ ಮಹದೇವಪ್ಪ ಟಾಂಗ್

ನಿಮ್ಮ ಸೇವೆಗೆ ದೇವರು ನನ್ನನ್ನು ಕಳುಹಿಸಿದ್ದಾನೆ: ಮೋದಿಗೆ ಮಹದೇವಪ್ಪ ಟಾಂಗ್

ಬೆಂಗಳೂರು: ದೇವದೂತ ಬಂದ ನಂತರವೇ ಈ ಎಲ್ಲ ಸಮಸ್ಯೆ ಶುರುವಾದವು ಎಂದು ನಿಮ್ಮ ಸೇವೆ ಮಾಡಲು ದೇವರು ನನ್ನನ್ನು ಕಳುಹಿಸಿದ್ದಾನೆಂಬ ಪ್ರಧಾನಿ ಮೋದಿ ಹೇಳಿಕೆಗೆ ಸಚಿವ ಹೆಚ್. ಸಿ.ಮಹದೇವಪ್ಪ ಟಾಂಗ್ ಕೊಟ್ಟಿದ್ದಾರೆ.

72 ರೂಪಾಯಿ ಇದ್ದ ಪೆಟ್ರೋಲ್ ಬೆಲೆ 100 ರೂಪಾಯಿಗೆ ಏರಿತು. 60 ರೂಪಾಯಿ ಇದ್ದ ಡೀಸೆಲ್ 85 ರೂಪಾಯಿಗೆ ಏರಿಕೆಯಾಯಿತು. ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಭಾರಿ ಕುಸಿತ ಕಂಡಿತು. ಅಡುಗೆ ಸಿಲಿಂಡರ್ ಬೆಲೆ 400 ರಿಂದ 1,000 ರೂ.ಗೆ ಏರಿಕೆ ಕಂಡಿತು ಎಂದು ವಾಗ್ದಾಳಿ ಮಾಡಿದ್ದಾರೆ. ಪುಲ್ವಾಮ ದಾಳಿ ನಡೆದು ಸೈನಿಕರು ಸಾವನ್ನಪ್ಪುವಂತಾಯಿತು. ಭಾರತ ಜಾಗತಿಕ ಹಸಿವಿನ ಸೂಚ್ಯಂಕ 55 ರಿಂದ 102ನೇ ಸ್ಥಾನಕ್ಕೆ ಕುಸಿಯಿತು. ಜನ ಸಾಮಾನ್ಯರ ಕೊಳ್ಳುವ ಶಕ್ತಿಯೇ ಕ್ಷೀಣಿಸಿತು. ಕೊರೊನಾ ವೇಳೆ ಆಕ್ಸಿಜನ್ ಸಿಗದೆ ಲೆಕ್ಕವಿಲ್ಲದ ಸಾವು ನೋವುಗಳಾದವು. ಚೀನಾವು ಗಡಿಯಲ್ಲಿ ಭಾರತವನ್ನು ಆಕ್ರಮಿಸಿ ಗ್ರಾಮಗಳನ್ನು ನಿರ್ಮಿಸಿತು. ಬಾಬಾ ಸಾಹೇಬರು ರಚಿಸಿದ ಸಂವಿಧಾನಕ್ಕೆ ಅಪಾಯ ಒದಗಿತು. ಜನರಿಗೆ ನ್ಯಾಯವಾಗಿಯೇ ನೀಡಬೇಕಿದ್ದ ಬರ ಪರಿಹಾರವನ್ನು, ನ್ಯಾಯಾಲಯದ ಮೆಟ್ಟಿಲೇರಿ ಪರಿಹಾರ ಪಡೆಯುವಂತೆ ಆಯಿತು. ಮಣಿಪುರದಂತಹ ರಾಜಕೀಯ ಅರಾಜಕತೆ, ಹಿಂಸೆ ನಡೆಯಿತು. ದೇಶದ ಸಾಲವು 55 ಲಕ್ಷ ಕೋಟಿಗಳಿಂದ 185 ಲಕ್ಷ ಕೋಟಿಗೆ ಏರಿತು. ದೇವದೂತ ಬಂದ ನಂತರ ಈ ಎಲ್ಲ ಸಮಸ್ಯೆಗಳು ಶುರುವಾದವು ಎಂದು ಹೆಚ್ಸಿ ಮಹದೇವಪ್ಪ ಸರಣಿ ಟ್ವೀಟ್ ಮಾಡಿದ್ದಾರೆ. ಚುನಾವಣೆಗಾಗಿ ಎಲ್ಲ ಮಾರ್ಗಗಳನ್ನು ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ತನ್ನನ್ನು ತಾನು ದೇವದೂತ ಎಂದು ಹೇಳಿಕೊಂಡಿರುವುದು ಹಾಸ್ಯಾಸ್ಪದ ಮತ್ತು ಅಷ್ಟೇ ಮೂಢನಂಬಿಕೆಯಿಂದ ಕೂಡಿದ ಸಂಗತಿಯಾಗಿದೆ. ಜನರಿಂದ ಭಗವಾನ್ ಎಂದು ಕರೆಸಿಕೊಂಡ ಗೌತಮ ಬುದ್ಧರೇ ನಾನು ಎಲ್ಲರಂತೆ ಸಾಮಾನ್ಯ ಎಂದಿರುವಾಗ ಪ್ರಧಾನಿಗಳು ಮೌಢ್ಯದ ಬಿತ್ತಲು ಮಾತನಾಡಬಾರದು ಎಂದು ವಾಗ್ದಾಳಿ ಮಾಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳಾಗಿದ್ದು, ಅವರಿಂದ ಆಯ್ಕೆಯಾದ ಪ್ರಧಾನಿ ಅವರು ಜನರ ದೂತರೇ ವಿನಃ ದೇವದೂತರಲ್ಲ. ಸಮಾನತೆ, ಸಾಮರಸ್ಯ ಮತ್ತು ಸೌಹಾರ್ದತೆಗೆ ವಿರುದ್ಧವಾದಂತಹ ಮೌಢ್ಯತೆಯನ್ನೇ ಪಾಲಿಸುವ ಪ್ರಧಾನಿಗಳು ಈ ದೇಶದ ಮಹೋನ್ನತವಾದ ಸಂವಿಧಾನಾತ್ಮಕ ಹುದ್ದೆಯಲ್ಲಿರುವುದು ದುರಂತವೇ ಸರಿ ಎಂದರು.

Join Whatsapp
Exit mobile version