ಭೋಪಾಲ್: ಪುಟ್ಟ ಮಕ್ಕಳಲ್ಲೂ ಕ್ರೂರ ಮನಸ್ಥಿತಿ ಬೆಳೆಯುತ್ತಿದೆಯಾ ಎಂದು ಆತಂಕ ಪಡಬೇಕಾದ ಗಂಭೀರ ಸಂಗತಿ ಮಧ್ಯಪ್ರದೇಶದ ಇಂದೋರ್‌ನಿಂದ ವರದಿಯಾಗಿದೆ. ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ 4ನೇ ತರಗತಿಯ ವಿದ್ಯಾಥಿಯೊಬ್ಬನ ಮೇಲೆ ಅದೇ ತರಗತಿಯ ಇನ್ನಿತರ ಮೂವರು ವಿದ್ಯಾರ್ಥಿಗಳು ಸೇರಿ ಜಾಮಿಟ್ರಿ ಕಾಂಪಸ್ ಸಾಧನದಿಂದ 108 ಬಾರಿ ಚುಚ್ಚಿ, ಹಲ್ಲೆ ನಡೆಸಿದ್ದಾರೆ.
ಏರೋಡ್ರೋಮ್ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯಲ್ಲಿ ಆತಂಕಕಾರಿ ಈ ಘಟನೆ ಸಂಭವಿಸಿದ್ದು, ಜನರನ್ನು ಬೆಚ್ಚಿಬೀಳಿಸಿದೆ. ಶಾಲಾ ಆಡಳಿತ, ಶಿಕ್ಷಕರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಮಕ್ಕಳ ಕಲ್ಯಾಣ ಸಮಿತಿಯೂ ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ತನಿಖೆ ನಡೆಸಿ, ವರದಿ ಸಲ್ಲಿಸುವಂತೆಯೂ ಪೊಲೀಸರನ್ನು ಕೇಳಿದ್ದೇವೆ ಎಂದು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಪಲ್ಲವಿ ಪೊರ್ವಾಲ್ ತಿಳಿಸಿದ್ದಾರೆ. ಅದೂ ಅಲ್ಲದೆ, ಜಗಳಕ್ಕೆ ಕಾರಣವೇನು? ಇಷ್ಟು ಸಣ್ಣ ವಯಸ್ಸಿನಲ್ಲೇ ಮಕ್ಕಳಲ್ಲಿ ಈ ಕ್ರೂರ ಪ್ರವೃತ್ತಿ ಶುರುವಾಗಿದ್ದು ಹೇಗೆ ಎಂಬುದನ್ನು ತನಿಖೆ ನಡೆಸಲು ಪೊಲೀಸರಿಗೆ ಸಮಿತಿ ಆದೇಶಿಸಿದೆ.