ಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು ಸ್ಥಗಿತಗೊಳಿಸುವುದಾಗಿ ಹೇಳಿರುವುದರಿಂದ ರಾಜ್ಯದಲ್ಲೂ ಮುಂದಿನ ವರ್ಷದಿಂದ ರಾಸಾಯನಿಕ ಗೊಬ್ಬರದ ಲಭ್ಯತೆ ಕಡಿಮೆಯಾಗಲಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಮೈಸೂರಿನ ನಾಗನಹಳ್ಳಿ ಕೃಷಿ ತರಬೇತಿ ಕೇಂದ್ರದಲ್ಲಿ ವಿಭಾಗ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆಯ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ಪ್ರಸಕ್ತ ವರ್ಷದಲ್ಲಿ 11.17 ಲಕ್ಷ ಮೆಟ್ರಿಕ್ ರಸಗೊಬ್ಬರಕ್ಕೆ ಬೇಡಿಕೆ ಇದ್ದು, ಎಲ್ಲಾ ಜಿಲ್ಲೆಗಳಿಗೂ ಅಗತ್ಯವಿರುಷ್ಟು ಪೂರೈಸಲಾಗಿದೆ. 2.56 ಲಕ್ಷ ಮೆಟ್ರಿಕ್ ಟನ್ ಗೋದಾಮಿನಲ್ಲಿ ಉಳಿದಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿರುವುದರಿಂದ ಭೂಮಿಯ ಫಲವತ್ತತೆ, ರೈತರ ಹಿತದೃಷ್ಟಿ, ಬೆಳೆಯ ಮೇಲಾಗುವ ಪರಿಣಾಮದಿಂದ ರಾಸಾಯನಿಕ ಗೊಬ್ಬರ ಕಡಿಮೆ ಮಾಡುವುದು ಅನಿವಾರ್ಯ. ಯೂರಿಯಾ ಪೂರೈಕೆ ಕಡಿಮೆಯಾಗುವುದರಿಂದ ಅಧಿಕಾರಿಗಳು, ಜಿಲ್ಲಾಡಳಿತದ ಸಲಹೆಯನ್ನು ರೈತರು ಪರಿಗಣಿಸಬೇಕು’ ಎಂದು ಮನವಿ ಮಾಡಿದರು.
ಡಿಎಪಿ ಗೊಬ್ಬರದ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಪ್ರತಿ ಕ್ಷೇತ್ರದಲ್ಲೂ ರೈತರಲ್ಲಿ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಎಲ್ಲಾ ಜಿಲ್ಲೆಗಳಲ್ಲೂ ಡಿಎಪಿ ಬಳಕೆ ಕಡಿಮೆಯಾಗಿದೆ. ಹಾವೇರಿ ಹಾಗೂ ಕೊಪ್ಪಳದಲ್ಲಿ ಇನ್ನಷ್ಟು ಕಡಿಮೆ ಮಾಡಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಶೇ.50ರಷ್ಟು ಕಡಿಮೆ ಮಾಡಿದ್ದಾರೆ ಎಂದರು.
ಈ ಬಾರಿ ಹೆಚ್ಚು ಮಳೆಯಾಗಿದ್ದರಿಂದ ಕಾವೇರಿ ಕೊಳ್ಳದ ಕೆ.ಆರ್.ಎಸ್, ಹಾರಂಗಿ, ಕಬಿನಿ ಹಾಗೂ ಹೇಮಾವತಿ ಜಲಾಶಯಗಳು ಸೇರಿದಂತೆ ಎಲ್ಲಾ ಅಣೆಕಟ್ಟೆಗಳು ತುಂಬಿವೆ. ಒಂದು ರೀತಿ ಸಂತೋಷವಾದರೂ, ಮಳೆ ಹೆಚ್ಚಾದರೆ ಆಸ್ತಿ, ಬೆಳೆ ನಷ್ಟವಾಗುವ ಆತಂಕವಿದೆ ಎಂದರು.
