ಕೆನರಾ ಬ್ಯಾಂಕ್ ವಿರುದ್ಧ ಕೆರಳಿದ ಕನ್ನಡಿಗರು: ಧಮ್ಕಿ ಹಾಕಿದ್ದ ಸಿಬ್ಬಂದಿ ಸಸ್ಪೆಂಡ್ !

Prasthutha|

ತುಮಕೂರು: ಕನ್ನಡದಲ್ಲಿ ಮಾತನಾಡಿದ ರೈತ ಗ್ರಾಹಕನೊಂದಿಗೆ,  ಕನ್ನಡದಲ್ಲಿ ವ್ಯವಹರಿಸಲು ನಿರಾಕರಿಸಿದ್ದಲ್ಲದೇ ರೈತನನ್ನು ಬ್ಯಾಂಕ್‍’ನಿಂದ ಹೊರಹೋಗುವಂತೆ ಧಮ್ಕಿ ಹಾಕಿ ಪೊಲೀಸರನ್ನು ಕರೆಸುವುದಾಗಿ ಬೆದರಿಸಿದ ಉತ್ತರ ಭಾರತ ಮೂಲದ ಉದ್ಯೋಗಿಯನ್ನು, ಬ್ಯಾಂಕ್ ಕೆಲಸದಿಂದ ವಜಾಗೊಳಿಸಿದ ಘಟನೆ ನಡೆದಿದೆ.

- Advertisement -

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಬುಕ್ಕಾ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್‍’ನ ಉದ್ಯೋಗಿಗೆ ಗ್ರಾಹಕರೊಬ್ಬರು ಕನ್ನಡದಲ್ಲಿ ವ್ಯವಹರಿಸುವಂತೆ ಹೇಳಿದ್ದಾರೆ. ಕನ್ನಡದಲ್ಲಿ ವ್ಯವಹರಿಸು ಎಂಬ ಪದ ಕೇಳಿದ್ದೇ ತಡ, ಇದಕ್ಕೆ ಧಿಮಾಕಿನಿಂದ ಪ್ರತಿಕ್ರಿಯೆ ನೀಡಿದ್ದ ಉತ್ತರ ಭಾರತ ಮೂಲದ ಸಿಬ್ಬಂದಿ ಕನ್ನಡ ಮಾತನಾಡೋದಿಲ್ಲ. ಬೇಕಾದರೆ ಅಕೌಂಟ್ ಕ್ಲೋಸ್ ಮಾಡಿ. ಬ್ಯಾಂಕ್’ನಿಂದ ಹೊರಗೆ ಹೋಗಿ, ನಾನು ಪೊಲೀಸರಿಗೆ ಫೋನ್ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದರು.

ವಿಷಯ ತಿಳಿಯುತ್ತಲೇ ಕನ್ನಡ ಪರ ಹೋರಾಟ ರೂಪೇಶ್ ರಾಜಣ್ಣ ಅವರು ಬುಕ್ಕಾ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಜೊತೆಗೆ ಕೆನರಾ ಬ್ಯಾಂಕ್’ನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದರು.

- Advertisement -

ದರ್ಪ ಪ್ರದರ್ಶಿಸಿದ್ದ ಬ್ಯಾಂಕ್ ಉದ್ಯೋಗಿ ರಾಜಣ್ಣ ಅವರಲ್ಲಿ ಕ್ಷಮೆ ಕೇಳಿದ್ದಾನೆ. ಜೊತೆಗೆ ಉದ್ಯೋಗಿಯನ್ನು ಅಮಾನತು ಮಾಡುವ ಮತ್ತು ಇನ್ಮುಂದೆ ಕನ್ನಡದಲ್ಲೇ ವ್ಯವಹರಿಸಲು ಕ್ರಮ ಕೈಗೊಳ್ಳುವ ಭರವಸೆಯನ್ನು ಕೆನರಾ ಬ್ಯಾಂಕ್ ನೀಡಿದೆ.

ಘಟನೆ ಬಗ್ಗೆ ಟ್ಬಿಟರ್’ನಲ್ಲಿ ಪ್ರತಿಕ್ರಿಯೆ ನೀಡಿರುವ ಕೆನರಾ ಬ್ಯಾಂಕ್ ‘ಎಲ್ಲಾ ಕನ್ನಡಿಗರಿಗೆ ಮನವಿ, ನಿನ್ನೆ ಬುಕ್ಕಾಪಟ್ಟಣದ ನಮ್ಮ ಬ್ಯಾಂಕ್ ಶಾಖೆಯಲ್ಲಿ ನಡೆದ ಘಟನೆ ಬಗ್ಗೆ ವಿಷಾದಿಸುತ್ತೇವೆ ಹಾಗೂ ಇನ್ನು ಮುಂದೆ ಇಂತಹ ಘಟನೆ ಆಗದಂತೆ ನೋಡಿಕೊಂಡು, ಈ ಘಟನೆ ಬಗ್ಗೆ ಸಂಬಂಧ ಪಟ್ಟ ಉದ್ಯೋಗಿಯ ಮೇಲೆ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸಲು ಕೂಡಲೇ ಆದೇಶಿಸಲಾಗಿದೆ.

ಸದಾ ನಾವು ಕನ್ನಡಪುರ ವಿಚಾರದಲ್ಲಿ ಕನ್ನಡಿಗರ ಜೊತೆ ಇದ್ದೇವೆ. ನಮ್ಮ ಬ್ಯಾಂಕ್ ಜೊತೆ ನಿಮ್ಮ ಸಹಕಾರ ಸದಾ ಮುಂದೆಯೂ ಇರಲಿ ಎಂದೂ ಕೇಳಿಕೊಳ್ಳುತ್ತಿದ್ದೇವೆ. ಕನ್ನಡವೇ ಸತ್ಯ. ಸದಾ ನಿಮ್ಮ ಸೇವೆಗಾಗಿ ಕೆನರಾ ಬ್ಯಾಂಕ್’ ಎಂದು ಪ್ರತಿಕ್ರಿಯೆ ನೀಡಿದೆ.

Join Whatsapp
Exit mobile version