ಕೇರಳದಲ್ಲಿ ನೊರೊವೈರಸ್ ಆತಂಕ | ನಿಫಾ, ಝೀಕಾ ಬಳಿಕ ಕೇರಳದಲ್ಲೀಗ ಹೊಸ ವೈರಾಣು!

Prasthutha|

ತಿರುವನಂತಪುರ : ಕೇರಳದ ಪಶುವೈದ್ಯಕೀಯ ಕಾಲೇಜಿನ ಸುಮಾರು 13 ವಿದ್ಯಾರ್ಥಿಗಳಿಗೆ ನೊರೊವೈರಸ್ ಖಾಯಿಲೆ ದೃಡಪಟ್ಟಿದೆ. ನಿಫಾ, ಝೀಕಾ ಸೋಂಕು ಬಳಿಕ ಹೊಸ ಸೋಂಕಿನ ತಲೆನೋವು ಕೇರಳಕ್ಕೀಗ ಎದುರಾಗಿದೆ. ನೊರೊವೈರಸ್ ನೀರಿನಿಂದ ಹರಡುವ ಕಾಯಿಲೆಯಾಗಿದ್ದು ಅದು ಕೊಳಕು ನೀರು ಮತ್ತು ಆಹಾರದ ಮೂಲಕ ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಸೋಂಕಿತ ವ್ಯಕ್ತಿಯ ನೇರ ಸಂಪರ್ಕದ ಮೂಲಕವೂ ರೋಗ ಹರಡಬಹುದು. ಪೀಡಿತ ವ್ಯಕ್ತಿಗಳ ವಾಂತಿ ಮತ್ತು ಮಲದ ಮೂಲಕ ವೈರಸ್ ಹರಡುತ್ತದೆ. ಈ ರೋಗವು ವೇಗವಾಗಿ ಹರಡುವ ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -

ಪೂಕೊಡೆ ಪಶುವೈದ್ಯಕೀಯ ಕಾಲೇಜಿನ ಸುಮಾರು 13 ವಿದ್ಯಾರ್ಥಿಗಳಿಗೆ ನೊರೊವೈರಸ್ ಕಾಯಿಲೆ ಇರುವುದು ದೃಢಪಟ್ಟಿದೆ, ಈ ರೋಗವು ಮೂರರಿಂದ ನಾಲ್ಕು ದಿನಗಳವರೆಗೆ ಇರಲಿವೆ ಎನ್ನಲಾಗಿದೆ. ಜನರು ಭಯಭೀತರಾಗದೆ ಮತ್ತು ಎಚ್ಚರಿಕೆಯಿಂದ ಹೆಜ್ಜೆ ಹಾಕುವಂತೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮನವಿ ಮಾಡಿದ್ದಾರೆ. ಅಲ್ಲದೇ “ಸೂಪರ್ ಕ್ಲೋರಿನೇಶನ್‌ನಂತಹ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಕುಡಿಯುವ ನೀರಿನ ಮೂಲಗಳು ಶುದ್ಧವಾಗಿದೆಯೇ ಎಂದು ಖಚಿತಪಡಿಸಿಕೊಂಡು ಬಳಸುವಂತೆ ವಿನಂತಿಸಿದ್ದಾರೆ.

ನೊರೊವೈರಸ್ ಕಾಯಿಲೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುವ ವೈರಸ್‌ಗಳ ಗುಂಪಾಗಿದ್ದು, ಕರುಳಿನ ಲೋಳೆಪೊರೆಯಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ, ತೀವ್ರವಾದ ವಾಂತಿ ಮತ್ತು ಅತಿಸಾರ ಭೇದಿಯು ಇದರ ಪ್ರಮುಖ ಲಕ್ಷಣವಾಗಿದ್ದು, ಈ ವೈರಸ್ ಆರೋಗ್ಯವಂತ ವ್ಯಕ್ತಿಗಳಲ್ಲಿ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ ಮಕ್ಕಳು, ವೃದ್ಧರು ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವವರಲ್ಲಿ ಇದು ಗಂಭೀರವಾಗಿರುತ್ತದೆ ಎನ್ನಲಾಗಿದೆ.

Join Whatsapp
Exit mobile version