ಮುಂಬಯಿ: ಸೌಂದರ್ಯವರ್ಧಕ ಸಾಧನಗಳ ಆನ್‌ಲೈನ್ ಮಾರುಕಟ್ಟೆಯಾದ ನೈಕಾ ಕಂಪನಿಯ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಮೊದಲ ದಿನವೇ 96%ದಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.
ಇದರಿಂದಾಗಿ IPO ಮೂಲಕ ಕಂಪನಿಯ ಷೇರುಗಳನ್ನು ಖರೀದಿಸಿದ್ದವರ ಹೂಡಿಕೆಯು ದುಪ್ಪಟ್ಟಾಗಿದೆ.
ನೈಕಾ ಕಂಪನಿಯ ಮೇಲೆ ಹೂಡಿಕೆ ಮಾಡಿದ್ದ ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್ ಹಾಗೂ ಆಲಿಯಾ ಭಟ್ ಇದೀಗ ಭರ್ಜರಿ ಲಾಭಗಳಿಸಿದ್ದಾರೆ ಎನ್ನಲಾಗಿದೆ.
2020ರ ಜುಲೈನಲ್ಲಿ ಆಲಿಯಾ ಭಟ್ ನೈಕಾ ಕಂಪನಿಯಲ್ಲಿ 4.95 ಕೋಟಿ ಬಂಡವಾಳ ಹೂಡಿದ್ದರು. ಈಗ ಹೂಡಿಕೆಗಿಂತ 10 ಪಟ್ಟು ಹೆಚ್ಚು ಹಣವನ್ನು ಆಲಿಯಾ ಗಳಿಸಿದ್ದಾರೆ ಎಂದು ಷೇರು ಪೇಟೆ ತಜ್ಞರು ಲೆಕ್ಕಾಚಾರ ನೀಡಿದ್ದಾರೆ, 4.94 ಕೋಟಿ ರುಪಾಯಿ ಇದ್ದ ಆಲಿಯಾ ಭಟ್ ಹೂಡಿಕೆ ಈಗ 54 ಕೋಟಿ ರೂಪಾಯಿ ತಲುಪಿದೆ ಎನ್ನಲಾಗುತ್ತಿದೆ.ಮತ್ತೊಂದೆಡೆ ಕತ್ರಿನಾ ಕೈಫ್ 2018ರಲ್ಲಿ ನೈಕಾ ಸಂಸ್ಥೆ ಮೇಲೆ 2.02 ಕೋಟಿ ಹೂಡಿಕೆ ಮಾಡಿದ್ದರು ಈಗ ಕತ್ರಿನಾ ಕೈಫ್ ಹೂಡಿಕೆ ಮೊತ್ತ ಈಗ 22 ಕೋಟಿ ತಲುಪಿದೆ.
ಕೋಟಕ್ ಮಹೀಂದ್ರಾ ಗ್ರೂಪ್’ನಲ್ಲಿ ಸಲಹೆಗಾರ್ತಿಯಾಗಿದ್ದ ಫಲ್ಗುಣಿ ನಾಯರ್, 9 ವರ್ಷಗಳ ಹಿಂದೆ
ಕಾಸ್ಮೆಟಿಕ್ಸ್ ವಲಯದ ಇ-ಕಾಮರ್ಸ್ ಕಂಪನಿ ನೈಕಾವನ್ನು ಸ್ಥಾಪಿಸಿದ್ದರು. ನೈಕಾ ಕಂಪನಿಯನ್ನು ನಾಯರ್, ಇದೀಗ 1 ಲಕ್ಷ ಕೋಟಿ ರೂ.ಗಳ ದಿಗ್ಗಜ ಕಂಪನಿಯನ್ನಾಗಿ ಪರಿವರ್ತಿಸಿದ್ದಾರೆ.ಜೊತೆಗೆ ಭಾರತದ ಮೊದಲ ಸೆಲ್ಫ್ ಮೇಡ್ ಬಿಲಿಯನೇರ್ ಮಹಿಳೆ ಪಟ್ಟವನ್ನು ಅಲಂಕರಿಸಿದ್ದಾರೆ.
ಮುಂಬಯಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ನೈಕಾ. ಕೋಲ್ ಇಂಡಿಯಾ, ಬಿಪಿಸಿಎಲ್, ಬ್ರಿಟಾನಿಯಾ ಇತ್ಯಾದಿ ದಿಗ್ಗಜ ಕಂಪನಿಗಳನ್ನೂ ಮಾರುಕಟ್ಟೆ ಮೌಲ್ಯದಲ್ಲಿ ಹಿಂದಿಕ್ಕಿದೆ.