Home ಜಾಲತಾಣದಿಂದ ಮಕ್ಕಾ ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ| ಮೂವರು ಸಂಘಪರಿವಾರದ ಕಾರ್ಯಕರ್ತರ ಬಂಧನ

ಮಕ್ಕಾ ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ| ಮೂವರು ಸಂಘಪರಿವಾರದ ಕಾರ್ಯಕರ್ತರ ಬಂಧನ

ಹೈದರಾಬಾದ್: ಐತಿಹಾಸಿಕ ಮಕ್ಕಾ ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಕೂಗಿದ ಮೂವರು ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಮಹಾರಾಷ್ಟ್ರ ಮೂಲದ ವೆಂಕಟ್ ಮತ್ತು ಅಮೋಲ್ ಹಾಗೂ ಕರ್ನಾಟಕ ಮೂಲದ ವಿಶಾಲ್ ಬಂಧಿತ ಆರೋಪಿಗಳು. ಆರೋಪಿಗಳು ಎರಡು ದಿನಗಳ ಹಿಂದೆ ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದರು.

ಮಸೀದಿಯಲ್ಲಿ ಕೆಲಸಕ್ಕೆಂದು ಬಂದಿದ್ದ ಇವರು ಮಸೀದಿಯ ಮೆಟ್ಟಿಲುಗಳ ಮೇಲೆ ಕುಳಿತು ಜೈ ಶ್ರೀರಾಮ್ ಘೋಷಣೆಗಳನ್ನು ಜೋರಾಗಿ ಕೂಗುತ್ತಿದ್ದರು.

ಮಕ್ಕಾ ಮಸೀದಿಯ ಭದ್ರತಾ ಉಸ್ತುವಾರಿಯಾಗಿರುವ ಹುಸೈನಿ ಆಲಂ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ಸೈಯದ್ ಖೈಸರುದ್ದೀನ್ ಪೊಲೀಸರಿಗೆ ಈ ಕುರಿತು ದೂರು ನೀಡಿದ್ದಾರೆ.

ಮಸೀದಿಯೊಳಗೆ ಜೈ ಶ್ರೀರಾಮ್ ಘೋಷಣೆ ಮೊಳಗುತ್ತಿದ್ದಂತೆಯೇ ಮುಸ್ಲಿಂ ಸಮುದಾಯದವರು ಮಸೀದಿ ಆವರಣದಲ್ಲಿ ಜಮಾಯಿಸಿ ಆರೋಪಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ನಂತರ ಹುಸೈನಿ ಆಲಂ ಪೊಲೀಸರು ಪ್ರಚೋದನಕಾರಿ ಘೋಷಣೆಗಳನ್ನು ಕೂಗುವ ಮೂಲಕ ಮುಸ್ಲಿಂ ಸಮುದಾಯದವರ ಭಾವನೆಗಳಿಗೆ ಧಕ್ಕೆ ತಂದಿದ್ದ ಆರೋಪದಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

“ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಮತ್ತು ಮೂವರು ಹೋಮ್ ಗಾರ್ಡ್‌ಗಳು ಸೇರಿದಂತೆ ಇತರ ಭದ್ರತಾ ಸಿಬ್ಬಂದಿ ಮಕ್ಕಾ ಮಸೀದಿ ಪ್ರದೇಶದಲ್ಲಿ ಶಾಂತಿ ಕದಡಲು ಯತ್ನಿಸಿದ್ದ ವೆಂಕಟ್, ಅಮೋಲ್ ಮತ್ತು ವಿಶಾಲ್ ಎಂಬ ಮೂವರನ್ನು ತಕ್ಷಣ ಬಂಧಿಸಿದ್ದಾರೆ” ಎಂದು ಹುಸೈನಿ ಆಲಂ ಪೊಲೀಸ್ ಠಾಣೆ ಸಬ್-ಇನ್‌ಸ್ಪೆಕ್ಟರ್ ಜೆ ಪ್ರಿಯಾಂಕಾ ಮಾಹಿತಿ ನೀಡಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 295 (ಎ) (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಮತ್ತು 298 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Join Whatsapp
Exit mobile version