ಉಡುಪಿ: ಮೋದಿ ಮತ್ತೆ ಪ್ರಧಾನಿಯಾಗಲು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬರಬೇಕು. ಬಿಜೆಪಿ ಸರ್ಕಾರ ಬಂದ ಮೇಲೆ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ಕೊನೆಗೊಳಿಸಿದೆ. ಬೇರೆ ಯಾವುದೇ ಸರ್ಕಾರ ಬಂದರೆ ಮತ್ತೆ ಮುಸ್ಲಿಮರಿಗೆ ಮೀಸಲಾತಿ ಆರಂಭಿಸುತ್ತಾರೆ. ಮತ್ತೆ ಮುಸ್ಲಿಂ ಮೀಸಲಾತಿ ಬೇಕಾ? ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಪ್ರಶ್ನಿಸಿದರು.
ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ ಪಿಎಫ್ಐ ಕಾರ್ಯಕರ್ತರು ಜೈಲಿನಿಂದ ಹೊರ ಬರುತ್ತಾರೆ. ಪಿಎಫ್ಐ ಕಾರ್ಯಕರ್ತರ ಜೈಲಿನ ಬಿಡುಗಡೆ ಬೇಕಾ? ನೀವೇ ಯೋಚಿಸಿ ಎಂದು ಬಿಜೆಪಿಗೆ ವೋಟ್ ಹಾಕುವಂತೆ ಮನವಿ ಮಾಡಿದರು.
ಮೋದಿ ಅವರು ಮತ್ತೆ ಈ ದೇಶದ ಪ್ರಧಾನಿಯಾಗಬೇಕು ಎಂದು ಬಯಸುವುದಾದರೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರಬೇಕು. ಕರ್ನಾಟಕದಲ್ಲಿ ಪಿಎಫ್ಐ ಸಂಘಟನೆಯ 92ಕ್ಕೂ ಅಧಿಕ ಜನರನ್ನು ಗಲ್ಲಿ ಗಲ್ಲಿಗಳಲ್ಲಿ ಹುಡುಕಿ ಬಂಧಿಸುವ ಕೆಲಸ ಬಿಜೆಪಿ ಸರ್ಕಾರ ಮಾಡಿದೆ. ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಸರ್ಕಾರ ಪಿಎಫ್ಐ ನ ಕೇಸ್ ಗಳನ್ನು ವಾಪಾಸ್ ಪಡೆದಿತ್ತು. ಕಾಂಗ್ರೆಸ್ ವೋಟ್ ಬ್ಯಾಂಕ್ಗಾಗಿ ದೇಶದ ಸುರಕ್ಷತೆಯನ್ನೇ ಕಡೆಗಣಿಸಿತ್ತು. ಆದರೆ ಬಿಜೆಪಿ ಸರ್ಕಾರ ಪಿಎಫ್ಐ ಬ್ಯಾನ್ ಮಾಡಿ ದೇಶವನ್ನು ರಕ್ಷಿಸಿದೆ ಎಂದು ಅಮಿತ್ ಶಾ ಹೇಳಿದರು.