Home ಟಾಪ್ ಸುದ್ದಿಗಳು ಆಂಧ್ರ ಪ್ರದೇಶದಲ್ಲಿ ಭಾರಿ ಪ್ರವಾಹ : 24 ದಾಟಿದ ಸಾವಿನ ಸಂಖ್ಯೆ, ನೂರಾರು ಮಂದಿ ಕಣ್ಮರೆ

ಆಂಧ್ರ ಪ್ರದೇಶದಲ್ಲಿ ಭಾರಿ ಪ್ರವಾಹ : 24 ದಾಟಿದ ಸಾವಿನ ಸಂಖ್ಯೆ, ನೂರಾರು ಮಂದಿ ಕಣ್ಮರೆ

ನದಿಪ್ರವಾಹದಲ್ಲಿ ಸಿಲುಕಿದ್ದ  ಕಾರ್ಮಿಕರನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ

ಆಂಧ್ರಪ್ರದೇಶ: ಭಾರಿ ಪ್ರವಾಹಕ್ಕೆ ಸಿಲುಕಿ ನಲುಗಿರುವ ಆಂಧ್ರ ಪ್ರದೇಶದಲ್ಲಿ ಮಳೆಯಿಂದಾಗಿ ಸಂಭವಿಸಿದ ಅವಘಡಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ.

ಅನಂತಪುರ ಜಿಲ್ಲೆಯ ಕೊತ್ತಪಲ್ಲಿ ಮಂಡಲಂನಲ್ಲಿ ಚಿತ್ರಾವತಿ ನದಿ ಪ್ರವಾಹದಲ್ಲಿ ಸಿಲುಕಿದ್ದ 10 ಮಂದಿ ಕಾರ್ಮಿಕರನ್ನು ಭಾರತೀಯ ವಾಯುಸೇನೆಯ ಎಂಐ17 ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದೆ. ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಸಿಲುಕಿದ್ದ ಕಾರ್ಮಿಕರು ಜೆಸಿಬಿ ಮೇಲೆ ಹತ್ತಿ ರಕ್ಷಣೆ ಪಡೆದಿದ್ದರು. ಕಾರ್ಮಿಕರನ್ನು ರಕ್ಷಿಸುವ ವೀಡಿಯೋವನ್ನು ಆಂಧ್ರ ಪ್ರದೇಶ ಪೊಲೀಸ್ ತಮ್ಮ ಟ್ವಿಟರ್ ಖಾತೆಯಲ್ಲಿ ಬಿಡುಗಡೆ ಮಾಡಿದೆ.

ದಕ್ಷಿಣ ಆಂಧ್ರ ಪ್ರದೇಶದ ರಾಯಲಸೀಮ ಪ್ರಾಂತ್ಯದಲ್ಲಿ ಪ್ರವಾಹ ಹೆಚ್ಚಾಗಿದ್ದು, ಅನಂತಪುರ, ತಿರುಪತಿ, ಚಿತ್ತೂರಿನಲ್ಲಿ ಭಾರಿ ಮಳೆ ಮತ್ತು ಪ್ರವಾಹ ಮುಂದುವರೆದಿದೆ. ತಿರುಪತಿಯಲ್ಲಿ ಪ್ರವಾಹ ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ತಿರುಮಲಕ್ಕೆ ಸಂಪರ್ಕ ಕಲ್ಪಿಸುವ ಘಾಟ್ ರಸ್ತೆಗಳನ್ನು ಮುಚ್ಚಲಾಗಿದೆ. ಅಲ್ಲದೆ ತಿರುಮಲ ನಡಿಗೆ ಮಾರ್ಗವನ್ನೂ ಬಂದ್ ಮಾಡಲಾಗಿದ್ದು, ಯಾತ್ರಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಮಳೆಯಿಂದಾಗಿ ತಿರುಪತಿ ಹೊರವಲಯದ ಸ್ವರ್ಣಮುಖಿ ನದಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದ್ದು,  ಜಲಾಶಯಗಳು ತುಂಬಿ ಹರಿಯುತ್ತಿವೆ. ಪ್ರವಾಹದಲ್ಲಿ ಸಾಕಷ್ಟು ಮಂದಿ ಸಿಲುಕಿರುವ ಬಗ್ಗೆ ವರದಿಯಾಗಿದ್ದು, ಹಲವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ರಾಯಲಸೀಮಾ ಪ್ರದೇಶವು ಹೆಚ್ಚು ಹಾನಿಗೊಳಗಾಗಿದೆ. ರಾಜ್ಯದ ಚಿತ್ತೂರು, ಕಡಪ, ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳು ಹಾನಿಗೀಡಾಗಿವೆ. ಗುರುವಾರದಿಂದ ಮಳೆ ಎಡೆಬಿಡದೆ ಸುರಿಯುತ್ತಿದ್ದು ಪರಿಣಾಮ ಚೆಯ್ಯೂರು ನದಿ ತುಂಬಿ ಹರಿಯುತ್ತಿದೆ. ಅನ್ನಮಯ್ಯ ನೀರಾವರಿ ಯೋಜನೆಗೂ ಪ್ರವಾಹದಿಂದ ಹಾನಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಕಡಪ ವಿಮಾನ ನಿಲ್ದಾಣವನ್ನು ನವೆಂಬರ್ 25 ರವರೆಗೆ ಮುಚ್ಚಲಾಗಿದೆ.

Join Whatsapp
Exit mobile version