ಪಾಟ್ನಾ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿರುವ ರಾಮಮಂದಿರವನ್ನು ಬುಲ್ಡೋಜರ್ ಹರಿಸಿ ಧ್ವಂಸಗೊಳಿಸಲಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್‌ನ ಕೇಂದ್ರ ಕಚೇರಿ ಸದಾಕತ್ ಆಶ್ರಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ನ ತೀರ್ಪಿಗೆ ಅನುಗುಣವಾಗಿ ರಾಮಮಂದಿರ ನಿರ್ಮಾಣ ಮಾಡಲಾಗಿದೆ. ಆ ದೇವಾಲಯವನ್ನು ಸಂಪೂರ್ಣ ದೇಶ ಸ್ವೀಕರಿಸಿದೆ ಎಂದರು.
ದೇವಾಲಯದ ನಿರ್ಮಾಣದ ಶ್ರೇಯಸ್ಸು ಸುಪ್ರೀಂಕೋರ್ಟ್‌ಗೆ ಸಲ್ಲುತ್ತದೆ ಎಂಬುದನ್ನು ಪ್ರಧಾನಿ ಅವರು ನೆನಪಿನಲ್ಲಿ ಇರಿಸಿಕೊಳ್ಳಬೇಕು. ದೇವರು ಎಲ್ಲರಿಗೂ ಸೇರಿದ್ದು. ಆದರೆ, ಪ್ರಧಾನಿ ಸ್ಥಾನದಲ್ಲಿರುವ ವ್ಯಕ್ತಿ ಈ ರೀತಿ ಮಾತನಾಡುವುದು ತೀರಾ ದುರದೃಷ್ಟಕರ ಎಂದು ಅವರು ಹೇಳಿದರು.
ನಮ್ಮ ಪಕ್ಷಕ್ಕೆ ಕಾನೂನಿನ ಮೇಲೆ ನಂಬಿಕೆ ಇದೆ. ನಾವು ಯಾವುದೇ ಆರಾಧನ ಕೇಂದ್ರದ ಮೇಲೆ ಬುಲ್ಡೋಜರ್ ಹರಿಸಲು ಬಯಸುವುದಿಲ್ಲ ಎಂದು ಮಾಜಿ ಕಾನೂನು ಹಾಗೂ ನ್ಯಾಯ, ಅಲ್ಪಸಂಖ್ಯಾತರ ವ್ಯವಹಾರಗಳಂತಹ ಖಾತೆ ನಿರ್ವಹಿಸಿದ ಸಲ್ಮಾನ್ ಖುರ್ಷಿದ್ ಹೇಳಿದರು.