Home ಟಾಪ್ ಸುದ್ದಿಗಳು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸಂವಿಧಾನ ವಿರೋಧಿ ನೀತಿ: ಖರ್ಗೆ ಕಿಡಿ

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಸಂವಿಧಾನ ವಿರೋಧಿ ನೀತಿ: ಖರ್ಗೆ ಕಿಡಿ

ನವದೆಹಲಿ: ಸಂಸತ್ತಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಾ.ಬಿ.ಅರ್‌.ಅಂಬೇಡ್ಕರ್‌ ಅವರನ್ನು ಅವಮಾನಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಅದೇ ಮನಸ್ಥಿತಿ ಪುನರಾವರ್ತನೆಯಾಗುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದ ಘಟನೆಗಳ ಬಗ್ಗೆ ಮಾಹಿತಿ ನೀಡಿ, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಮಧ್ಯಪ್ರದೇಶದ ದೇವಾಸ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ ದಲಿತ ಯುವಕನನ್ನು ಹತ್ಯೆ ಮಾಡಲಾಗಿದೆ. ಒಡಿಶಾದ ಬಾಲಸೋರ್‌ನಲ್ಲಿ ಬುಡಕಟ್ಟು ಮಹಿಳೆಯರನ್ನು ಮರಗಳಿಗೆ ಕಟ್ಟಿ ಹಾಕಿ ಥಳಿಸಿದ್ದಾರೆ. ಹರಿಯಾಣದ ಭಿವಾನಿಯಲ್ಲಿ ದಲಿತ ವಿದ್ಯಾರ್ಥಿನಿಯೊಬ್ಬರು ಬಿ.ಎ ಪರೀಕ್ಷೆಯ ಶುಲ್ಕ ಕಟ್ಟಲಾಗದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಬುಡಕಟ್ಟು ಗರ್ಭಿಣಿ ಮಹಿಳೆಯೊಬ್ಬರಿಗೆ ಆಸ್ಪತ್ರೆಯಲ್ಲಿ ಐಸಿಯು ವ್ಯವಸ್ಥೆ ಸಿಗದೆ 100 ಕಿ.ಮೀ ಪ್ರಯಾಣಿಸಿದ್ದಾರೆ. ಈ ವೇಳೆ ಆಕೆ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರಿದು, ‘ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಮೂರು ದಲಿತ ಕುಟುಂಬಗಳ ಮೇಲೆ ಜಾತಿ ಆಧಾರಿತ ಹಲ್ಲೆ ನಡೆಸಿ ಬಲವಂತವಾಗಿ ಅವರನ್ನು ವಲಸೆ ಹೋಗುವಂತೆ ಮಾಡಲಾಗಿದೆ. ಈ ವಿಚಾರದಲ್ಲಿ ಪೊಲೀಸರು ಮೌನ ವಹಿಸಿದ್ದಾರೆ. ‘ಮೋದಿ ಸರ್ಕಾರದ ಸಂವಿಧಾನ ವಿರೋಧಿ ಆಡಳಿತದಲ್ಲಿ ದಲಿತರು, ಆದಿವಾಸಿಗಳು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ಎಲ್ಲರಿಗೂ ತಿಳಿದೇ ಇದೆ. ಬಡವರು ಮತ್ತು ವಂಚಿತರು ಮನುವಾದದ ಹೊಡೆತವನ್ನು ಅನುಭವಿಸುತ್ತಿದ್ದಾರೆ’. ದಲಿತ-ಬುಡಕಟ್ಟು ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಪ್ರತಿ ಗಂಟೆಗೆ ಒಂದು ಅಪರಾಧ ನಡೆಯುತ್ತದೆ. ಎನ್‌ಸಿಆರ್‌ಬಿ ಪ್ರಕಾರ, ಈ ಅಂಕಿ ಅಂಶವು 2014ರಿಂದ ದ್ವಿಗುಣಗೊಂಡಿದೆ’ ಎಂದಿದ್ದಾರೆ.

‘140 ಕೋಟಿ ಭಾರತೀಯರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಣೆಗಾಗಿ ನಾವು (ಕಾಂಗ್ರೆಸ್) ಹೋರಾಟ ನಡೆಸುತ್ತೇವೆ. ಬಿಜೆಪಿ-ಆರ್‌ಎಸ್‌ಎಸ್‌ನ ಸಂವಿಧಾನ ವಿರೋಧಿ ಚಿಂತನೆಯನ್ನು ವಿರೋಧಿಸುತ್ತೇವೆ’ ಎಂದು ವಾಗ್ದಾಳಿ ನಡೆಸಿದ್ದಾರೆ.

Join Whatsapp
Exit mobile version