ಪೌಷ್ಠಿಕಾಂಶ ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಕೆನೆಭರಿತ ಹಾಲು : ಸಚಿವ ಎಸ್.ಸುರೇಶ್ ಕುಮಾರ್

Prasthutha|

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿಗಳ‌ ಆಶಯದಂತೆ ಕೋವಿಡ್ ಸಂದರ್ಭದಲ್ಲಿ‌ ವಿದ್ಯಾರ್ಥಿಗಳಿಗೆ ಪೋಷಕಾಂಶದ ಆಹಾರವನ್ನು ಒದಗಿಸುವ ಭಾಗವಾಗಿ ಜೂನ್, ಜುಲೈ 2021ರ ಮಾಹೆಗಳಿಗೆ ಕೆನೆಭರಿತ‌ ಹಾಲಿನ ಪುಡಿಯನ್ನು ವಿತರಿಸಲು ಶಿಕ್ಷಣ‌ ಇಲಾಖೆಯು ಇಂದು 16371 ಲಕ್ಷ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಿದೆ‌ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

- Advertisement -

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಸಚಿವರು, ಶಾಲೆಗಳು ಭೌತಿಕವಾಗಿ ನಡೆಯದೇ‌ ಇದ್ದರೂ ಮಧ್ಯಾಹ್ನ ಉಪಹಾರದ ಆಹಾರ ಧಾನ್ಯಗಳು, ಅಡುಗೆ ಎಣ್ಣೆ ಸೇರಿದಂತೆ ಪೂರಕ‌ ಸಾಮಗ್ರಿಗಳನ್ನು ನಿರಂತರವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಠಿಕಾಂಶದ ಆಹಾರ ದೊರಕಬೇಕು ಎನ್ನುವ ಸದುದ್ದೇಶದಿಂದ ಈಗ ಜೂನ್ ಹಾಗೂ ಜುಲೈ ಮಾಹೆಗಳಿಗೆ ಸಂಬಂಧಿಸಿದಂತೆ ಪ್ರತಿ‌ ವಿದ್ಯಾರ್ಥಿಗೆ ಪ್ರತಿ‌ ಮಾಹೆಗೆ ಅರ್ಧ ಕಿಲೋಗ್ರಾಂ ಕೆನೆಭರಿತ‌ ಹಾಲಿನ ಪುಡಿಯನ್ನು ಒದಗಿಸಲು ಆಲೋಚಿಸಿದ್ದೇವೆ. ಆ ಮೂಲಕ ನಮ್ಮ ವಿದ್ಯಾರ್ಥಿಗಳ ಆರೋಗ್ಯಕ್ಕೆ‌ ಪರಿಪೂರ್ಣ ಬೆಂಬಲವನ್ನು ದೊರಕಿಸುವ, ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶ ಸರ್ಕಾರದ್ದಾಗಿದೆ‌ ಎಂದಿದ್ದಾರೆ.

ಸರ್ಕಾರದ ಈ ನಿರ್ಧಾರವು ನಮ್ಮ ಮಕ್ಕಳ ಪೌಷ್ಠಿಕತೆಗೆ ಪೂರಕವಾಗುವುದಷ್ಟೇ ಅಲ್ಲ, ಸಂಕಷ್ಟದಲ್ಲಿರುವ ಗ್ರಾಮೀಣ ಹಾಲು ಉತ್ಪಾದಕರ, ರೈತರ ಆರ್ಥಿಕ ಮಟ್ಟ ಸುಧಾರಿಸಲು‌ ನೆರವಾಗಲಿದೆ ಎಂದು ಸಹ ಸಚಿವ ಸುರೇಶ್ ಕುಮಾರ್‌ ಹೇಳಿದ್ದಾರೆ. ಸಾರ್ವಜನಿಕ ಶಿಕ್ಷಣ‌ ಇಲಾಖೆಯ ಆಯುಕ್ತರಿಗೆ ಈ ಹಾಲಿನ ಪುಡಿಯ ಪ್ಯಾಕೆಟ್ ವಿತರಣಾ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿ‌ ನಿಗದಿ ಪಡಿಸಲಾಗಿದೆ ಎಂದಿರುವ ಸಚಿವರು ತಮ್ಮ ಇಲಾಖೆಯು ಸಲ್ಲಿಸಿದ ಪ್ರಸ್ತಾವನೆಗೆ ಅತಿಶೀಘ್ರದಲ್ಲಿ ಅನುಮೋದನೆ ನೀಡಿದ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Join Whatsapp
Exit mobile version