Home ಟಾಪ್ ಸುದ್ದಿಗಳು ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಶೂನ್ಯ ಕೊಡುಗೆ: ಡಿ.ಕೆ.ಶಿವಕುಮಾರ್

ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಶೂನ್ಯ ಕೊಡುಗೆ: ಡಿ.ಕೆ.ಶಿವಕುಮಾರ್

ಬೆಂಗಳೂರು: ಕರ್ನಾಟಕಕ್ಕೆ ಯೋಜನೆಗಳ ಸುರಿಮಳೆಯ ಬಜೆಟ್ ಕೊಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ 25 ಬಿಜೆಪಿ ಸಂಸದರು ಹಾಗೂ ಮುಖ್ಯಮಂತ್ರಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲ ರಂಗದಲ್ಲೂ ಕರ್ನಾಟಕ ರಾಜ್ಯಕ್ಕೆ ಶೂನ್ಯ ಕೊಡುಗೆ ಹಾಗೂ ಕರ್ನಾಟಕದ ಹೆಸರನ್ನೂ ಪ್ರಸ್ತಾಪ ಮಾಡದಂತಹ ಬಜೆಟ್ ಅನ್ನು ಕೇಂದ್ರ ಸರ್ಕಾರ ಇಂದು ಮಂಡಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ಸರ್ಕಾರ ಯಾರಿಗೂ ನೆರವಾಗಲಿಲ್ಲ. ಅವರು ಘೋಷಿಸಿದ ಪರಿಹಾರವೂ ಜನರಿಗೆ ತಲುಪಲಿಲ್ಲ. ಹೀಗಾಗಿ ಕೇಂದ್ರ ಬಜೆಟ್ ನಲ್ಲಿ ಕೋವಿಡ್ ನಿಂದ ಸತ್ತವರ ಕುಟುಂಬಗಳಿಗೆ ತಲಾ 4 ಲಕ್ಷ ರು. ಪರಿಹಾರ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರ ವೆಚ್ಚ ಭರಿಸುವ ನಿರೀಕ್ಷೆ ಇತ್ತು. ಅದೆಲ್ಲವೂ ಹುಸಿಯಾಗಿದೆ ಎಂದು ತಿಳಿಸಿದರು.

ನಮ್ಮ ರಾಜ್ಯದಿಂದ ಆಯ್ಕೆಯಾಗಿ ಕೇಂದ್ರ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತರಾಮನ್ ಅವರು ಕಿಂಚಿತ್ತಾದರೂ ಸ್ವಾರ್ಥ ಪ್ರದರ್ಶಿಸಿ ರಾಜ್ಯದ ಬಗ್ಗೆ ಯೋಚಿಸುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆವು. ಆ ನಿರೀಕ್ಷೆ ಸುಳ್ಳಾಗಿದೆ. ಇದು ಕೇಂದ್ರ ಬಜೆಟ್ ಅಲ್ಲ. ಕೋವಿಡ್ ಬಜೆಟ್. ಕೋವಿಡ್ ನಿಂದ ಜನ, ಸಮಾಜ, ಎಲ್ಲ ವರ್ಗದ ಜನ ಹೇಗೆ ನರಳಿದ್ದರೋ ಅದೇರೀತಿ ಈ ಬಜೆಟ್ ನಿಂದ ಕೂಡ ಎಲ್ಲ ವರ್ಗದ ಜನ ನರಳುವಂತಾಗಿದೆ.

ಕ್ರಿಪ್ಟೋ ಕರೆನ್ಸಿ ಕಾನೂನಾತ್ಮಕಗೊಳಿಸಿ ಶೇ.30 ರಷ್ಟು ತೆರಿಗೆ ವಿಧಿಸಿದ್ದಾರೆ. ನರೇಗಾ ಯೋಜನೆಗೆ ಅನುದಾನ ಕಡಿಮೆ ಮಾಡಿದ್ದಾರೆ. ಇನ್ನು ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದವರು, ವರ್ಷಕ್ಕೆ 60 ಲಕ್ಷ ಉದ್ಯೋಗ ಕೊಡುತ್ತೇವೆ ಎಂದಿದ್ದಾರೆ. ಆ ಮೂಲಕ ಈ ದೇಶದ ಯುವಕರಿಗೆ ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರ 2 ಕೋಟಿ ಉದ್ಯೋಗದಿಂದ 60 ಲಕ್ಷ ಉದ್ಯೋಗಕ್ಕೆ ಇಳಿದಿದ್ದು, ಉಳಿದ 1.40 ಕೋಟಿ ಯುವಕರಿಗೆ ಅನ್ಯಾಯ ಮಾಡಲು ಸಿದ್ಧವಾಗಿದೆ. ಅವರ 2 ಕೋಟಿ ಉದ್ಯೋಗ ಸೃಷ್ಟಿ ಕೇವಲ ಚುನಾವಣೆ ಹೇಳಿಕೆ ಎಂಬುದು ಸಾಬೀತಾಗಿದೆ ಎಂದು ಟೀಕಿಸಿದರು.

ಕೋವಿಡ್ ಸಮಯದಲ್ಲಿ ತೊಂದರೆ ಅನುಭವಿಸಿ ಉದ್ಯೋಗ ಕಳೆದುಕೊಂಡವರು, ವ್ಯಾಪಾರ ಕಳೆದುಕೊಂಡವರು, ರೈತರು, ಕಾರ್ಮಿಕರು, ಚಾಲಕರು, ಅಸಂಘಟಿತ ಕಾರ್ಮಿಕರಿಗೆ ಈ ಬಜೆಟ್ ನಲ್ಲಿ ಸಣ್ಣ ನೆರವಾದರೂ ಸಿಕ್ಕಿದೆಯೇ? ಲಾಕ್ ಡೌನ್, ಸೀಲ್ ಡೌನ್ ನಿಂದ ತೊಂದರೆ ಅನುಭವಿಸಿದವರಿಗೆ ಯಾವುದೇ ನೆರವು ನೀಡಿಲ್ಲ. ವೇತನ ಶ್ರೇಣಿಯವರಿಗೂ, ರೈತರಿಗೂ, ಸ್ವಯಂ ಉದ್ಯೋಗಸ್ಥರಿಗೂ, ಉದ್ಯೋಗದಾತರು ಹಾಗೂ ಉದ್ಯೋಗಿಗಳು ಸೇರಿದಂತೆ ಯಾವುದೇ ವರ್ಗಕ್ಕೂ ಈ ಬಜೆಟ್ ನಿಂದ ಅನುಕೂಲವಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಇಂತಹ ಪೇಶೆಂಟ್  ಹಾಗೂ ಕೋವಿಡ್ ಬಜೆಟ್ ಅನ್ನು ನಾನು ಕಂಡಿರಲಿಲ್ಲ. ಮನೆಗಳ ನಿರ್ಮಾಣ ಹೆಚ್ಚಿಸುತ್ತೇವೆ ಎಂದು ಬಜೆಟ್ ನಲ್ಲಿ ಹೇಳಿದ್ದಾರೆ. ಆದರೆ ಮನೆ ಕಟ್ಟಲು ಬೇಕಾಗಿರುವ ಸಿಮೆಂಟ್, ಕಬ್ಬಿಣ ಮತ್ತಿತರ ವಸ್ತುಗಳ ದರಗಳನ್ನು ಕಡಿಮೆ ಮಾಡಲು ಕ್ರಮ ಕೈಗೊಂಡಿದ್ದೀರಾ? ಇಲ್ಲ. ಈ ಸರ್ಕಾರ ಕಾರ್ಪೊರೇಟ್ ಲಾಬಿಗೆ ಮಣಿದು ಅವರಿಗೆ ನೆರವಾಗುವ ಕೆಲಸ ಮಾಡುತ್ತಿದೆಯೇ ಹೊರತು ಜನ ಸಾಮಾನ್ಯರಿಗೆ ಅನುಕೂಲವಾಗುವ ಯಾವುದೇ ಯೋಜನೆಗಳು ಇದರಲ್ಲಿ ಇಲ್ಲ. ಎಲ್ಲರ ಜೇಬಿಗೂ ಕತ್ತರಿ ಹಾಕಿ ಪಿಕ್ ಪಾಕೆಟ್ ಮಾಡುವ ಬಜೆಟ್ ಇದಾಗಿದೆ ಎಂದರು.

ಕಾವೇರಿ ಹಾಗೂ ಪೆನ್ನಾರ್ ನದಿ ಜೋಡಣೆ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದರಿಂದ ಕರ್ನಾಟಕಕ್ಕೆ ಯಾವ ಅನುಕೂಲವಾಗುತ್ತದೆ? ಕರ್ನಾಟಕಕ್ಕೆ ಅನುಕೂಲವಾಗುವ ಯಾವುದಾದರೂ ಯೋಜನೆ ಪ್ರಕಟಿಸಿದ್ದಾರಾ? ಏನೂ ಇಲ್ಲ. ಅವರಿಗೆ ರಾಜ್ಯದ ಬಗ್ಗೆ ನಿಜಕ್ಕೂ ಕಾಳಜಿ ಇದ್ದರೆ ಎರಡು ಮೂರು ದಿನಗಳಲ್ಲಿ ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ ಅನುಮತಿ ನೀಡಿ ಯೋಜನೆ ಆರಂಭಿಸಲಿ. ರಾಜ್ಯಗಳಿಗೆ 1 ಲಕ್ಷ ಕೋಟಿ ಸಾಲ ನೀಡುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಕೇಂದ್ರ ಸರ್ಕಾರ ಅನುದಾನ ಕೊಟ್ಟಿದೆಯಾ? ಸಾಲ ನೀಡಲು ಬ್ಯಾಂಕ್ ಗಳಿವೆ. ಇವರೇಕೆ ಬೇಕು? ಯಾವುದೂ ಬೇಡ, ಕೇಂದ್ರ ಸರ್ಕಾರ ಡಿಜಿಟಲ್ ಯೂನಿವರ್ಸಿಟಿ ಮಾಡುತ್ತೇವೆ ಎಂದಿದೆ. ಆ ಡಿಜಿಟಲ್ ಯೂನಿವರ್ಸಿಟಿಯನ್ನು ಕರ್ನಾಟಕದಲ್ಲಿ ಮಾಡಿಸಲಿ ನೋಡೋಣ. ನಮ್ಮಲ್ಲಿ ಐಟಿ, ಬಿಟಿ ಕ್ಷೇತ್ರ ಉತ್ತಮವಾಗಿದೆ. ರೈತರ ಜತೆ ಮಾತನಾಡಿ ಅದಕ್ಕೆ ಬೇಕಾದ ಜಮೀನನ್ನು ನಮ್ಮ ಕ್ಷೇತ್ರದಲ್ಲಿ ನೀಡುವ ಕೆಲಸ ಮಾಡುತ್ತೇನೆ ಎಂದರು.

ಕರ್ನಾಟಕದ ನಿಮ್ಹಾನ್ಸ್ ನಲ್ಲಿ ನೋಡಲ್ ಕಚೇರಿಯನ್ನು ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸರ್ಕಾರದಲ್ಲಿ ಮೆಂಟಲ್ ಗಿರಾಕಿಗಳು ಹೆಚ್ಚಾಗಿದ್ದಾರೆ. ಅವರನ್ನು ನೋಡಿಕೊಳ್ಳಲು ಒಬ್ಬರನ್ನು ನೇಮಿಸುತ್ತಿದ್ದಾರೆ ಎಂದರು.

ಈ ಬಜೆಟ್ ನಲ್ಲಿ ಗ್ರಾಮೀಣ ಪ್ರದೇಶಗಳ ಬಗ್ಗೆ ಗಮನಹರಿಸಲಾಗಿದೆಯೇ ಎಂಬ ಪ್ರಶ್ನೆಗೆ, ‘ಗ್ರಾಮೀಣ ಅಭಿವೃದ್ಧಿಗೆ ಎಲ್ಲಿ ಆದ್ಯತೆ ನೀಡಿದ್ದಾರೆ? ನರೇಗಾ ಯೋಜನೆಗೆ ನೀಡುವ ಅನುದಾನವನ್ನು ಕಡಿತಗೊಳಿಸಲಾಗಿದೆ. ಇದಕ್ಕೆ ಹೆಚ್ಚಿನ ಅನುದಾನ ನೀಡಿದ್ದರೆ ಪಂಚಾಯ್ತಿ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯ ಹಾಗೂ ಉದ್ಯೋಗ ಸೃಷ್ಟಿಯಾಗುತ್ತಿತ್ತು. ಆದರೆ ಈ ಬಜೆಟ್ ನಲ್ಲಿ ಅದಾಗಲಿಲ್ಲ’ ಎಂದರು.

ಬಜೆಟ್ ನಲ್ಲಿನ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತೀರಾ ಎಂಬ ಪ್ರಶ್ನೆಗೆ, ‘ಈ ಸರ್ಕಾರ ಹೋರಾಟಕ್ಕೆ ಅವಕಾಶ ನೀಡುತ್ತಿಲ್ಲ. ಯಾರೊಬ್ಬರೂ ಧ್ವನಿ ಎತ್ತಲು ಅವಕಾಶವಿಲ್ಲ. ನಾವು ಕೂಡ ಸಮಯಕ್ಕಾಗಿ ಕಾಯುತ್ತಿದ್ದೇವೆ. ಅವರು ಕಾವೇರಿ ಹಾಗೂ ಪೆನ್ನಾರ್ ನದಿ ಜೋಡಣೆ ವಿಚಾರ ಪ್ರಸ್ತಾಪಿಸಿದ್ದು ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರ ಹೇಳಿಕೆಯನ್ನು ಎದುರು ನೋಡುತ್ತಿದ್ದೇನೆ ಎಂದು ಉತ್ತರಿಸಿದರು.

ಸಂಪುಟ ವಿಸ್ತರಣೆ ವಿಚಾರವಾಗಿ ಮುಖ್ಯಮಂತ್ರಿಗಳ ದೆಹಲಿ ಭೇಟಿ ಬಗ್ಗೆ ಕೇಳಿದ ಪ್ರಶ್ನೆಗೆ, ‘ನನಗೆ ಮುಖ್ಯಮಂತ್ರಿಗಳ ಬಲವೇನು? ದೌರ್ಬಲ್ಯವೇನು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಅವರೇ ಈ ಬಗ್ಗೆ ಮಾಹಿತಿ ನೀಡಬೇಕು. ಬಿಜೆಪಿ ನಾಯಕರು ಸಾಕಷ್ಟು ಸೂತ್ರಗಳನ್ನು ಪ್ರಯೋಗಿಸುತ್ತಿದ್ದು, ಅವರ ಆಂತರಿಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡಲು ಬಯಸುವುದಿಲ್ಲ’ ಎಂದರು.

ಬಿಜೆಪಿ ಸಂಸದರು ರಾಜ್ಯಕ್ಕಾಗಿ ಏನನ್ನೂ ಕೇಳುತ್ತಿಲ್ಲವೇ ಎಂಬ ಪ್ರಶ್ನೆಗೆ, ‘ಇದೇ ಕಾರಣಕ್ಕೆ ಬಿಜೆಪಿಯ ಎಲ್ಲ ಸಂಸದರಿಗೆ ಸನ್ಮಾನ ಮಾಡಬೇಕು ಎಂದು ಅವರ ಪಕ್ಷದವರಿಗೂ ಹಾಗೂ ನಮ್ಮ ಪಕ್ಷದವರಿಗೂ ಹೇಳುತ್ತೇನೆ’ ಎಂದರು.

ಮೇಕೆದಾಟು ಪಾದಯಾತ್ರೆಯನ್ನಯ ಯಾವಾಗ ಪುನರಾರಂಭಿಸುತ್ತೀರಿ ಎಂಬ ಪ್ರಶ್ನೆಗೆ, ‘ನಿಮಗೆ ಮಾಹಿತಿ ನೀಡಿಯೇ ಪಾದಯಾತ್ರೆ ಆರಂಭಿಸುತ್ತೇವೆ. ಈಗ ರಾಜಕೀಯ ಸಮಾವೇಶಗಳಲ್ಲಿ 1000 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಮುಂದೆ ಕರ್ನಾಟಕ ಸರ್ಕಾರ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡೋಣ’ ಎಂದರು.

ಅಶೋಕ್ ಪಟ್ಟಣ ಅವರಿಗೆ ಶಿಸ್ತು ಸಮಿತಿಯಿಂದ ನೋಟೀಸ್ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅದಕ್ಕೆ ಒಂದು ಪ್ರತ್ಯೇಕ ಸಮಿತಿ ಇದೆ. ಆ ಸಮಿತಿ ಎಲ್ಲವನ್ನೂ ನೋಡಿಕೊಳ್ಳಲಿದೆ’ ಎಂದರು.

Join Whatsapp
Exit mobile version