ಬೆಂಗಳೂರು: ಮಠಗಳಿಗೆ ನೀಡುವ ಅನುದಾನದಲ್ಲಿ ರಾಜ್ಯ ಸರ್ಕಾರ 30% ಕಮಿಷನ್ ಪಡೆಯುತ್ತಿದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದೆ. ರಾಜ್ಯ ಸರ್ಕಾರದ ಮೇಲಿರುವ ಕಮಿಷನ್ ಆರೋಪ ಪ್ರಕರಣಗಳ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಖಾನ್ ಒತ್ತಾಯಿಸಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ಪೋಸ್ಟ್ ಹಾಕಿರುವ ಅವರು, ಕೇವಲ ಸರ್ಕಾರಿ ಕಾಮಗಾರಿಗಳಲ್ಲಿ ಮಾತ್ರವಲ್ಲ, ಮಠಗಳಿಗೆ ನೀಡುವ ಅನುದಾನದಲ್ಲೂ 30% ಕಮಿಷನ್ ಪಡೆಯುವ ಮೂಲಕ ಸರ್ಕಾರದ ಭ್ರಷ್ಟಾಚಾರ ಎಲ್ಲೆ ಮೀರಿದೆ. ಈ ಭಂಡಗೆಟ್ಟ ಸರ್ಕಾರ ಆಡಳಿತ ನಡೆಸುವ ನೈತಿಕತೆ ಕಳೆದುಕೊಂಡಿರುವುದರಿಂದ ರಾಜ್ಯಪಾಲರು ಮಧ್ಯಪ್ರವೇಶಿಸಿ ಸರ್ಕಾರವನ್ನು ವಿಸರ್ಜಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರದ ಸಚಿವರುಗಳ ಕಮಿಷನ್ ಕಿರುಕುಳಕ್ಕೆ ಈಗಾಗಲೇ ಗುತ್ತಿಗೆದಾರನೋರ್ವ ಬಲಿಯಾಗಿದ್ದಾನೆ. ರಾಜ್ಯದ ಕೊಲೆಗಡುಕ ಸರ್ಕಾರದ ಮೇಲಿರುವ ಆರೋಪಕ್ಕೆ ಪುಷ್ಟಿ ನೀಡುವಂತೆ ಮಾತನಾಡಿರುವ ಗೌರವಾನ್ವಿತ ದಿಂಗಾಲೇಶ್ವರ ಸ್ವಾಮೀಜಿ ಅವರಿಗೆ ಸೂಕ್ತ ರಕ್ಷಣೆ ನೀಡುವ ಅಗತ್ಯವಿದೆ ಎಂದು ಖಾನ್ ತಿಳಿಸಿದರು.
ವಾಮ ಮಾರ್ಗದ ಮೂಲಕ ಮೈತ್ರಿ ಸರ್ಕಾರವನ್ನು ಬೀಳಿಸಿ, ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಕಮಿಷನ್ ದಂಧೆಯನ್ನೇ ಮೂಲ ಉದ್ದೇಶವಾಗಿಟ್ಟುಕೊಂಡು ಆಡಳಿತ ನಡೆಸುತ್ತಿದೆ. ಹಿಂದೆ ಶಾಸಕರುಗಳ ಖರೀದಿಗೆ ಹೂಡಿದ ಬಂಡವಾಳವನ್ನು ಈಗ ಕಮಿಷನ್ ಮೂಲಕ ಬಡ್ಡಿ ಸಮೇತ ವಸೂಲಿಗೆ ಇಳಿದಂತಿದೆ. ಜನರ ಆಶೊತ್ತರಗಳಿಗೆ ಸ್ಪಂದಿಸಲು ವಿಫಲವಾಗಿರುವ ರಾಜ್ಯ ಸರ್ಕಾರ ಜನಸಾಮಾನ್ಯರಿಗೆ ದ್ರೋಹ ಮಾಡುತ್ತಿದೆ.
ರಾಜ್ಯದಲ್ಲಿನ ಹಲವು ಜಲ್ವಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವುದು ಬಿಟ್ಟು ಧರ್ಮಗಳನ್ನು ಎತ್ತಿಕಟ್ಟಿ ಸಮಾಜದ ಶಾಂತಿ ಕದಡಿ ಆ ಮೂಲಕ ತನ್ನ ವೈಫಲ್ಯವನ್ನು ಮರೆಮಾಚಿಕೊಳ್ಳುತ್ತಿದೆ. ಒಂದೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿ, ಜನಜೀವನ ಅಸ್ತವ್ಯಸ್ತವಾಗಿದ್ದರೆ, ಇನ್ನೊಂದೆಡೆ ರಾಜ್ಯ ಸರ್ಕಾರ ತನ್ನ ಬ್ರಹ್ಮಾಂಡ ಭ್ರಷ್ಟಾಚಾರದ ಮೂಲಕ ಜನರ ಬೆವರಿನ ಹಣವನ್ನು ಕೊಳ್ಳೆಹೊಡೆಯುತ್ತಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಅರಾಜಕತೆಯ ಪರಿಸ್ಥಿತಿ ನಿರ್ಮಾಣವಾಗಿ, ಜನರ ಕಷ್ಟ ಕೇಳುವವರಿಲ್ಲದಾಗಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.