Home ಟಾಪ್ ಸುದ್ದಿಗಳು ಕರ್ನಾಟಕದಲ್ಲಿ ‘ನಾನೇಕೆ ಗಾಂಧಿಯನ್ನು ಕೊಂದೆ’ ಸಿನಿಮಾ ತಡೆಗೆ ಯಂಗ್ ಬ್ರಿಗೇಡ್ ಸೇವಾದಳದಿಂದ ಮನವಿ

ಕರ್ನಾಟಕದಲ್ಲಿ ‘ನಾನೇಕೆ ಗಾಂಧಿಯನ್ನು ಕೊಂದೆ’ ಸಿನಿಮಾ ತಡೆಗೆ ಯಂಗ್ ಬ್ರಿಗೇಡ್ ಸೇವಾದಳದಿಂದ ಮನವಿ

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮಹಾತ್ಮ ಗಾಂಧೀಜಿ ಅವರನ್ನು ವಿರೋಧಿಸುವ ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾ ಬಿಡುಗಡೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್  ಸೇವಾದಳ ಯಂಗ್ ಬ್ರಿಗೇಡ್ ಇದರ ರಾಜ್ಯಾಧ್ಯಕ್ಷರಾದ ಜುನೈದ್ ಪಿ.ಕೆ ನೇತೃತ್ವದಲ್ಲಿ ಇಂದು ಕರ್ನಾಟಕ ಚಲನಚಿತ್ರ ನಿಗಮ ಮಂಡಳಿಗೆ ಮನವಿ ಸಲ್ಲಿಸಿದ್ದಾರೆ.

ಪ್ರಮುಖವಾಗಿ ಜ.30 ರಂದು ಚಿತ್ರಮಂದಿರ ಹಾಗೂ ಓಟಿಟಿ ವೇದಿಕೆಗಳಲ್ಲಿ ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಒಂದೆಡೆ ಅಹಿಂಸೆ, ಶಾಂತಿಗಾಗಿ ಗಾಂಧೀಜಿ ಅವರ ಪುಣ್ಯತಿಥಿ ಆಚರಿಸಿದರೆ, ಮತ್ತೊಂದೆಡೆ ʼನಾನೇಕೆ ಗಾಂಧಿಯನ್ನು ಕೊಂದೆʼ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಮಹಾತ್ಮರವರು ಮೂರು ಗುಂಡಿನಿಂದ ಹುತಾತ್ಮರಾದ ಮೇಲೆ ಸೈದ್ಧಾಂತಿಕವಾಗಿ ಮಹಾತ್ಮನ ಚರಿತ್ರೆಯ ಮೇಲೆ ಗುಂಡು ಹಾರಿಸುತ್ತಲೇ ಇದ್ದಾರೆ. ಆದರೆ ಸಂವಿಧಾನ ಬದ್ಧ ಜನರು ಮಹಾತ್ಮನನ್ನು ಇಂದಿಗೂ ರಕ್ಷಿಸುತ್ತಲೇ ಬಂದಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಂಪೂರ್ಣ ಗೌರವ ಇರುವ ಸಲುವಾಗಿ ಜನರಲ್ಲಿ ಕೋಮುಸೌಹಾರ್ದ ಕೊಲ್ಲುವ, ಜಾತೀಯ ಶ್ರೇಣಿಕೃತ ವ್ಯವಸ್ಥೆ ಬೆಂಬಲಿಸುವಂತೆ ಪ್ರೇರೇಪಿಸುವ ಇಂತಹ ಸಿನಿಮಾಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮಾಧಿ ಮಾಡುವ ಬುನಾದಿಯಾಗಿದೆ.

ಮಹಾತ್ಮ ಗಾಂಧೀಜಿಯವರ ಅನುಯಾಯಿಗಳಾದ ನಾವು ಮಹಾತ್ಮನನ್ನು ಗುಂಡಿಟ್ಟು ಕೊಂದ ಹೇಡಿಯನ್ನು ಸದಾ ವಿರೋಧಿಸಿ ಸಂವಿಧಾನಾತ್ಮಕವಾದ ಪ್ರಜೆಯ ಮೂಲಭೂತ ಕರ್ತವ್ಯಗಳನ್ನು ಪಾಲಿಸುತ್ತಿದ್ದೇವೆ. ಹದಗೆಡುತ್ತಿರುವ ಸಮಾಜದ ಸೌಹಾರ್ದತೆಯನ್ನು ಹಾಗೂ ಸಾಮಾಜಿಕ ಸಾಮರಸ್ಯ ಪುನಃ ಪ್ರತಿಷ್ಠಾಪಿಸಲು ಮಹಾತ್ಮನ ವಿಚಾರ ದೇಶದ ಮೂಲೆ ಮೂಲೆಗಳಲ್ಲೂ ತಲುಪಿಸಬೇಕಾಗಿದೆ ಹೊರತು ಹೇಡಿಯಾದ ಕೊಲೆಗಡುಕ ಗೋಡ್ಸೆಯ ದೃಷ್ಟಿಕೋನಗಳನ್ನಲ್ಲ! ಸಮಾಜದ ಸೌಹಾರ್ದತೆಗಾಗಿ ಹಾಗೂ ಕೋಮು ಸೌಹಾರ್ದತೆಗಾಗಿ ಈ ಚಲನಚಿತ್ರದ ಬಿಡುಗಡೆಯನ್ನು ನಿಷೇಧಿಸುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್  ಸೇವಾದಳ ಯಂಗ್ ಬ್ರಿಗೇಡ್ ಆಗ್ರಹಿಸಿದೆ. ಈ ಸಂಧರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್  ಸೇವಾದಳ ಯಂಗ್ ಬ್ರಿಗೇಡ್ ಇದರ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರವಿ ಕುಮಾರ್ ಮತ್ತು ಸುರೇಂದ್ರ ಅವರು ಉಪಸ್ಥಿತರಿದ್ದರು.

Join Whatsapp
Exit mobile version