ದುಬೈ; ಮಹತ್ವದ ತೀರ್ಮಾನವೊಂದರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಐಸಿಸಿ , ಝಿಂಬಾಬ್ವೆ ತಂಡದ ಮಾಜಿ ನಾಯಕ ಬ್ರೆಂಡನ್ ಟೇಲರ್’ಗೆ 3.5 ವರ್ಷಗಳ ಕಾಲ ಕ್ರಿಕೆಟ್’ನಿಂದ ನಿಷೇಧ ಹೇರಿದೆ. 35 ವರ್ಷ ವಯಸ್ಸಿನ ಟೇಲರ್ ಮೇಲಿನ ನಿಷೇಧ ಜುಲೈ 28, 2025ರವರೆಗೂ ಮುಂದುವರಿಯಲಿದೆ.
ಈ ಕುರಿತು ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ, ‘ಐಸಿಸಿ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನ ಉಲ್ಲಂಘಿಸಿರುವ ನಾಲ್ಕು ಆರೋಪಗಳನ್ನ ಮತ್ತು ಡೋಪಿಂಗ್ ವಿರೋಧಿ ಸಂಹಿತೆಯನ್ನ ಉಲ್ಲಂಘಿಸಿರುವ ಒಂದು ಪ್ರತ್ಯೇಕ ಆರೋಪವನ್ನ ಬ್ರೆಂಡನ್ ಟೇಲರ ಒಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಕ್ರಿಕೆಟ್ ಎಲ್ಲಾ ಆವೃತ್ತಿಗಳಿಂದ ಮೂರೂವರೆ ವರ್ಷಗಳ ನಿಷೇಧವನ್ನ ಹೇರಲಾಗಿದೆ’ ಎಂದು ಐಸಿಸಿ ಪ್ರಕಟಿಸಿದೆ.
ಏನಿದು ಪ್ರಕರಣ?
8 ಸೆಪ್ಟೆಂಬರ್ 2021ರಂದು ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಟೇಲರ್ ಉತ್ತೇಜಕ ವಸ್ತುವಾದ ಬೆಂಜೊಯ್ಲೆಕಾಗ್ನೈನ್ ಎಂಬ ಕೊಕೇನ್ ಸೇವಿಸಿರುವುದು ಪಂದ್ಯದ ಬಳಿಕ ನಡೆಸಲಾದ ಪರೀಕ್ಷೆಯಲ್ಲಿ ಸಾಬೀತಾಗಿತ್ತು. ಐಸಿಸಿ ಡೋಪಿಂಗ್ ವಿರೋಧಿ ಕೋಡ್ 2.1 ಅಡಿಯಲ್ಲಿ ಇದನ್ನು ‘ದುರ್ಬಳಕೆಯ ವಸ್ತು’ ಎಂದು ನಿರ್ದಿಷ್ಟಪಡಿಸಲಾಗಿದೆ.
ಕಳೆದ 17 ವರ್ಷಗಳಿಂದ ಜಿಂಬಾಬ್ವೆ ತಂಡದ ಸದಸ್ಯನಾಗಿರುವ ಟೇಲರ್’ಗೆ ಐಸಿಸಿಯ ಭ್ರಷ್ಟಾಚಾರ ವಿರೋಧಿ ಹಾಗೂ ಡೋಪಿಂಗ್ ನಿಯಮಗಳ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಅದನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಐಸಿಸಿ ಇಂಟಗ್ರಿಟಿ ಯುನಿಟ್ ವಿಭಾಗದ ಮುಖ್ಯಸ್ಥರಾದ ಅಲೆಕ್ಸ್ ಮಾರ್ಷಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.