Home ಟಾಪ್ ಸುದ್ದಿಗಳು ಬೆಳಿಗ್ಗೆ ಕಾಂಗ್ರೆಸ್’ನಿಂದ ಉಚ್ಛಾಟನೆ, ಮಧ್ಯಾಹ್ನ ಬಿಜೆಪಿ ಕೇಂದ್ರ ನಾಯಕರಿಂದ ಆತ್ಮೀಯ ಸ್ವಾಗತ !

ಬೆಳಿಗ್ಗೆ ಕಾಂಗ್ರೆಸ್’ನಿಂದ ಉಚ್ಛಾಟನೆ, ಮಧ್ಯಾಹ್ನ ಬಿಜೆಪಿ ಕೇಂದ್ರ ನಾಯಕರಿಂದ ಆತ್ಮೀಯ ಸ್ವಾಗತ !

ನವದೆಹಲಿ; ಪಂಚರಾಜ್ಯ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷಾಂತರ ಪರ್ವ ಜೋರಾಗಿದ್ದು ದಶಕಗಳ ಪಕ್ಷ ನಿಷ್ಠೆ ಬಿಟ್ಟು ವೈರಿಗಳನ್ನು ಮಿತ್ರರೆಂದು ಅಪ್ಪಿಕೊಳ್ಳುತ್ತಿರುವ ನಾಯಕರ ಸಂಖ್ಯೆ ಹೆಚ್ಚಾಗುತ್ತಿದೆ.
ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಗುರುವಾರ ಬೆಳಿಗ್ಗೆಯಷ್ಟೇ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿದ್ದ ಉತ್ತರಾಖಂಡ ಪ್ರದೇಶ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಕಿಶೋರ್‌ ಉ‍ಪಾಧ್ಯಾಯರನ್ನು, ಮಧ್ಯಾಹ್ನದ ವೇಳೆಗೆ
ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ ಹಾಗೂ ಅಜಯ್ ಭಟ್ ಅವರು ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡರು. ತೆಹ್ರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಉಪಾಧ್ಯಾಯ ಕಣಕ್ಕಿಳಿಯುವ ಸಾಧ್ಯತೆಯಿದೆ.

ಬಿಜೆಪಿ ನಾಯಕರ ಜೊತೆ ಉಪಧ್ಯಾಯ ಸಭೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಪಕ್ಷದ ಎಲ್ಲ ಚಟುವಟಿಕೆಗಳಿಂದ ಕಿಶೋರ್ ಅವರನ್ನು ಕಾಂಗ್ರೆಸ್ ದೂರ ಇರಿಸಿತ್ತು. ಮತ್ತೊಂದೆಡೆ ಹಿರಿಯ ನಾಯಕರಾಗಿದ್ದರೂ ಪಕ್ಷ ತಮ್ಮನ್ನು ಸುದೀರ್ಘ ಅವಧಿಯಿಂದ ಕಡೆಗಣಿಸುತ್ತಿದೆ ಎಂದು ಆರೋಪಿಸುತ್ತಿದ್ದ ಉಪಾಧ್ಯಾಯ ಅವರು ಬಿಜೆಪಿಗೆ ಹೋಗುವ ಸುಳಿವನ್ನೂ ನೀಡಿದ್ದರು.

2002 ಹಾಗೂ 2007ರ ವಿಧಾನಸಭಾ ಚುನಾವಣೆಯಲ್ಲಿ ತೆಹ್ರಿಯಿಂದ ಗೆದ್ದಿದ್ದ ಕಿಶೋರ್ ಉಪಾಧ್ಯಾಯ, 2012ರಲ್ಲಿ ಪಕ್ಷೇತರ ಅಭ್ಯರ್ಥಿ ದಿನೇಶ್ ಧನಾಯಿ ಅವರ ವಿರುದ್ಧ ಕೇವಲ 377 ಮತಗಳ ಅಂತರದಿಂದ ಸೋತಿದ್ದರು. 2017ರ ಚುನಾವಣೆಯಲ್ಲಿ ಸಹಾಸ್‌ಪುರದಿಂದ ಸ್ಪರ್ಧಿಸಿದ್ದ ಉಪಾಧ್ಯಾಯ, ಬಿಜೆಪಿ ಅಭ್ಯರ್ಥಿ ಸಹದೇವ್ ಸಿಂಗ್ ಪುಂಡಿರ್ ವಿರುದ್ಧ ಪರಾಭವಗೊಂಡಿದ್ದರು.

Join Whatsapp
Exit mobile version