ಆಧಾರರಹಿತ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

Prasthutha|

ಬೆಂಗಳೂರು: ಆಧಾರರಹಿತ ಆರೋಪ ಮಾಡಿರುವವರ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಸಕಾಲ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಸಚಿವ ನಾಗೇಶ್ ಅವರು ಮಾತನಾಡಿದ ಅವರು, ದುರುದ್ದೇಶ ಹಾಗೂ ವೈಯಕ್ತಿಕ ತೇಜೋವಧೆ ಮಾಡುವ ಉದ್ದೇಶದಿಂದ ಆಧಾರರಹಿತ ಆರೋಪಗಳನ್ನು ನನ್ನ ವಿರುದ್ಧ ಮಾಡಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪ ಮಾಡಲಾಗಿದೆ. ಆದರೆ, ಈ ಕುರಿತು ನಮ್ಮ ಕಚೇರಿಗೆ ಯಾವುದೇ ದೂರುಗಳನ್ನು ನೀಡಿಲ್ಲ. ಆಯುಕ್ತರ ಕಚೇರಿಗೂ ಯಾವುದೇ ದೂರು ನೀಡಿಲ್ಲ. ಸಾಕ್ಷ್ಯಾಧಾರಗಳ ಸಮೇತ ದೂರು ನೀಡಿದರೆ ಈ ಬಗ್ಗೆ ಸಂಬಂಧಿಸಿದವರ ವಿರುದ್ಧ ಸೂಕ್ತ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ. ನಮ್ಮ ಕಚೇರಿಗೆ ದೂರು ನೀಡಲಾಗದಿದ್ದರೆ ತನಿಖಾ ಸಂಸ್ಥೆಗಳು, ನ್ಯಾಯಾಲಯಗಳಿಗೂ ದೂರು ನೀಡಬಹುದು. ಸಾಕ್ಷ್ಯಾಧಾರ ಸಹಿತ ದೂರು ನೀಡುವುದನ್ನು ಮುಕ್ತವಾಗಿ ಸ್ವಾಗತಿಸುತ್ತೇನೆ. ಆದರೆ, ಆಧಾರ ರಹಿತ ಆರೋಪ ಮಾಡುವುದು ಬೇಜವಾಬ್ದಾರಿತನದ ಪರಮಾವಧಿ ಎಂದು ಹೇಳಿದರು.

- Advertisement -

ಶಾಲೆಗಳ ಪ್ರಥಮ ಮಾನ್ಯತೆ ಮತ್ತು ಮಾನ್ಯತೆ ನವೀಕರಣ ಪ್ರಕ್ರಿಯೆಯನ್ನು ಪಾರದರ್ಶಕ ಹಾಗೂ ತ್ವರಿತಗೊಳಿಸಲು ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಅರ್ಜಿ ಸಲ್ಲಿಸುವ ಶಾಲೆಗಳಿಗೆ ತ್ರಿಸದಸ್ಯ ಸಮಿತಿ ಭೇಟಿ ನೀಡಿದಾಗ ಶಾಲೆಯ ಪ್ರತಿನಿಧಿಗಳು ಸ್ಥಳದಲ್ಲಿದ್ದು, ಶಾಲೆಯಲ್ಲಿನ ಮೂಲಸೌಕರ್ಯಗಳ ವಿವರಗಳನ್ನು ನೀಡಬೇಕು. ಬೇರೆ ಯಾವುದೇ ಕಾರಣಗಳಿಗೆ ಶಿಕ್ಷಣ ಇಲಾಖೆಯ ಕಚೇರಿಗೆ ಭೇಟಿ ನೀಡುವ ಅಗತ್ಯತೆ ಇರುವುದಿಲ್ಲ ಎಂದು ತಿಳಿಸಿದರು.

ಹೊಸ ಶಾಲೆಗಳ ಆರಂಭಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆಯಿಂದ ಪ್ರಮಾಣಪತ್ರ ಪಡೆಯಲು ವಿಳಂಬವಾಗುತ್ತಿದೆ ಎಂದು ಶಿಕ್ಷಣ ಸಂಸ್ಥೆಗಳು ಮನವಿ ಸಲ್ಲಿಸಿದ್ದವು. ಹಿನ್ನೆಲೆಯಲ್ಲಿ ಈ ಸಾಲಿನಲ್ಲಿ ಹೊಸ ಶಾಲೆ ನೋಂದಣಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಒಟ್ಟು ಎಂಟು ಬಾರಿ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

- Advertisement -

ಇಲಾಖೆಯಿಂದ ಅನುಮತಿ, ಮಾನ್ಯತೆಯನ್ನು ಪಡೆದುಕೊಳ್ಳದೇ ನಿಯಮಬಾಹಿರವಾಗಿ ಹೊಸದಾಗಿ ಆರಂಭಿಸಲಾಗಿರುವ ಶಾಲೆಗಳ ಕುರಿತು ಶಿಕ್ಷಣ ಇಲಾಖೆಯಿಂದ ಪರಿಶೀಲನೆ ನಡೆದಿದೆ. ನಿಯಮ ಪಾಲಿಸದ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಗ್ರಾಮೀಣ ವಿದ್ಯಾಭ್ಯಾಸ ಪ್ರಮಾಣಪತ್ರ, ಕನ್ನಡ ಮಾಧ್ಯಮ ಪ್ರಮಾಣಪತ್ರ, ವ್ಯಾಸಂಗ ಪ್ರಮಾಣಪತ್ರ ಸೇರಿದಂತೆ ಇನ್ನಿತರ ಪ್ರಮಾಣಪತ್ರಗಳನ್ನು ಪಡೆಯಲು ಭವಿಷ್ಯದಲ್ಲಿ ತೊಂದರೆಯಾಗಬಾರದು ಎಂಬ ಸದುದ್ದೇಶದಿಂದ ಈ ಪರಿಶೀಲನೆ ಪ್ರಕ್ರಿಯೆ ನಡೆಸಲಾಗುತ್ತಿದೆ. ಮಕ್ಕಳ ಭವಿಷ್ಯಕ್ಕಾಗಿ ಕೈಗೊಳ್ಳಲಾದ ಸರ್ಕಾರದ ಈ ಕ್ರಮವನ್ನು ಸಹಿಸದ ಕೆಲವು ಶಿಕ್ಷಣ ವಿರೋಧಿ ಶಕ್ತಿಗಳು ಈ ಸುಳ್ಳು ಆರೋಪ ಮಾಡುತ್ತಿರಬಹುದು. ಇದರಲ್ಲಿ ಬ್ಲ್ಯಾಕ್‌ಮೇಲ್ ತಂತ್ರವೂ ಅಡಗಿರಬಹುದು.’ ಎಂದು ಸಚಿವ ನಾಗೇಶ್ ಅವರು ಅಭಿಪ್ರಾಯಪಟ್ಟರು.

ಯಾವುದೇ ಖಾಸಗಿ ಶಾಲೆ ಮತ್ತು ಆ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಯಾವುದೇ ರೀತಿಯಿಂದಲೂ ತೊಂದರೆಯಾಗದಂತೆ ಸರ್ಕಾರ ಕ್ರಮ ವಹಿಸಲಿದೆ. ಆದರೆ, ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ಸುಪ್ರೀಂಕೋರ್ಟ್ ನಿರ್ದೇಶನಗಳು, ಮಾರ್ಗಸೂಚಿ ಅನುಸಾರ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು’ ಎಂದು ಸಚಿವರು ನುಡಿದರು.

‘ಸುಪ್ರೀಂಕೋರ್ಟ್ ಆದೇಶದ ಉಲ್ಲಂಘನೆಯಾಗದಂತೆ ಸಂಬಂಧಿಸಿದ ಇಲಾಖೆಗಳ ‌ ಚರ್ಚಿಸಿ ಶಾಲಾ ಕಟ್ಟಡ ಮತ್ತು ಅಗ್ನಿ ಸುರಕ್ಷತೆ ಪರಿಶೀಲನೆ ಪ್ರಕ್ರಿಯೆಯನ್ನು ಸರಳೀಕರಿಸಲಾಗಿದೆ. ಶಾಲಾ ಕಟ್ಟಡಗಳ ಸುರಕ್ಷತೆ ಕುರಿತು ಪರಿಶೀಲನೆಯನ್ನು ಈ ಹಿಂದೆ ಕಾರ್ಯನಿರ್ವಾಹಕ ಅಭಿಯಂತರರು ಮಾಡುತ್ತಿದ್ದರು. ಇದನ್ನು ಬದಲಾವಣೆ ಮಾಡಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಿಗೆ ಅಧಿಕಾರ ವಿಕೇಂದ್ರೀಕರಿಸಲಾಗಿದೆ’ ಎಂದು ಸಚಿವರು ಹೇಳಿದರು.

ವೈಯಕ್ತಿಕವಾಗಿ ಹಾಗೂ ಶಿಕ್ಷಣ ಇಲಾಖೆಯ ವಿರುದ್ಧ ಆರೋಪ ಮಾಡಿರುವ ವ್ಯಕ್ತಿಯಿಂದ ಮಾಡಿರುವ ಆರೋಪಗಳ ಕುರಿತಂತೆ ದಾಖಲೆಗಳನ್ನು ಪಡೆದು, ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ನಾಗೇಶ್ ತಿಳಿಸಿದರು.

Join Whatsapp
Exit mobile version