Home ಟಾಪ್ ಸುದ್ದಿಗಳು ಶರಣ್ ಪಂಪ್‌ವೆಲ್ ‘ಪ್ರತೀಕಾರದ ಹತ್ಯೆ’ ಹೇಳಿಕೆಗೆ ವ್ಯಾಪಕ ಖಂಡನೆ

ಶರಣ್ ಪಂಪ್‌ವೆಲ್ ‘ಪ್ರತೀಕಾರದ ಹತ್ಯೆ’ ಹೇಳಿಕೆಗೆ ವ್ಯಾಪಕ ಖಂಡನೆ

ಪ್ರವೀಣ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್ ನ ಫಾಝಿಲ್ ನನ್ನು ಕೊಲೆ ಮಾಡಲಾಯಿತು. ಇದು ಹಿಂದೂ ಯುವಕರ ಸಾಮರ್ಥ್ಯ ಎಂಬ ಬಜರಂಗದಳ ಮುಖಂಡ ಶರಣ್ ಪಂಪ್‌ವೆಲ್ ಪ್ರಚೋದನಕಾರಿ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹಲವು ಸಂಘಟನೆಗಳು ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಹೇಮನಾಥ್ ಶೆಟ್ಟಿ ಕಾವು, ವಿಶ್ವ ಹಿಂದೂ ಪರಿಷತ್ತಿನ ನಾಯಕ ಶರಣ್ ಪಂಪ್ವೆಲ್ ಫಾಸಿಲ್ ಕೊಲೆಯನ್ನು ಪ್ರತೀಕಾರದ ಕೊಲೆ ಎಂದು ಹೇಳಿರುವುದರಿಂದ ಜಿಲ್ಲೆಯ ಜನರ ಮನಸ್ಸಿನಲ್ಲಿ ಆತಂಕ ಮನೆ ಮಾಡಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಹಿಂದೂ ಸಂಘಟನೆ ಎನ್ನುವುದು ಕಾನೂನು ಕೈಗೆತ್ತಿಕೊಂಡು ಅನ್ಯ ಧರ್ಮೀಯರನ್ನು ಕೊಲೆಗೈದು ಪ್ರತೀಕಾರ ತೀರಿಸಿಕೊಳ್ಳಲು ಇರುವಂತೆ ಸರಕಾರ ನಿರ್ದೇಶಿಸಿದೆಯೇ? ಮುಖ್ಯಮಂತ್ರಿಗಳು ಜಿಲ್ಲೆಯಲ್ಲಿ ಇರುವ ದಿನವೇ ಈ ದುರ್ಘಟನೆ ಸಂಭವಿಸಿರುವುದು ಇವರ ಹೇಳಿಕೆಗೆ ಪುಷ್ಟಿ ನೀಡಿದೆ. ಪೂರ್ಣ ಸತ್ಯಾಸತ್ಯತೆ ಹೊರ ಬರಲು ತನಿಖೆ ಆಗಬೇಕಿದೆ‌ ಎಂದು ಅವರು ಹೇಳಿದ್ದಾರೆ.

SDPI ಖಂಡನೆ

ಶರಣ್ ಪಂಪ್‌ವೆಲ್ ಹೇಳಿಕೆಯನ್ನು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಬಲವಾಗಿ ಖಂಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಅವರು, ಸುರತ್ಕಲ್ ಫಾಝಿಲ್ ಕೊಲೆಯನ್ನು “ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತೀಕಾರ” ಎಂದು ಬಜರಂಗದಳದ ಶರಣ್ ಪಂಪ್ ವೆಲ್ ಸಮರ್ಥಿಸಿಕೊಂಡಿದ್ದು ತಕ್ಷಣ ಈತನನ್ನು ಬಂಧಿಸಿ ದ.ಕ ಜಿಲ್ಲೆಯಲ್ಲಿ ಇದುವರೆಗೆ ನಡೆದಿರುವ ಕೊಲೆಗಳಲ್ಲಿ ಇವನ ಪಾತ್ರವೇನು ಎಂಬ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು ಎಂದು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ.

DYFI ಖಂಡನೆ

ಈ ಕುರಿತು ಪ್ರತಿಕ್ರಿಯಿಸಿರುವ DYFI ರಾಜ್ಯಾಧ್ಯಕ್ಷರಾದ ಮುನೀರ್ ಕಾಟಿಪಳ್ಳ, ಶರಣ್ ಪಂಪ್‌ವೆಲ್ ತುಮಕೂರಿನಲ್ಲಿ ಸಂಫಪರಿವಾರದ ವೇದಿಕೆಯಲ್ಲಿ ಮಾಡಿದ ಭಾಷಣ ದುಷ್ಟತನದ ಪರಮಾವಧಿ. ಸುರತ್ಕಲ್ ಜಂಕ್ಷನ್ ನಲ್ಲಿ ನಡೆದ ಅಮಾಯಕ ಮುಸ್ಲಿಂ ಯುವಕ ಫಾಝಿಲ್ ಕೊಲೆಯನ್ನು “ನಮ್ಮ ಹುಡುಗರು ಎಲ್ಲರ ಎದುರೇ ಶೌರ್ಯದಿಂದ ನುಗ್ಗಿ ಮಾಡಿದ ಕೊಲೆ” ಎಂದು ಬಹಿರಂಗವಾಗಿ ಹೇಳಿದ್ದಾರೆ. ಇನ್ನಷ್ಟು ಇಂತಹ ದಾಳಿಗಳು ನಡೆಯಲಿದೆ ಎಂದು ಬೆದರಿಕೆ ಹಾಕಿದ್ದಾರೆ. ಗುಜರಾತ್ ಗಲಭೆಯ ಎರಡು ಸಾವಿರ ಜನರ ಕೊಲೆಯನ್ನೂ ಸಮರ್ಥಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದು ತೀರಾ ಆತಂಕಕಾರಿ ಬೆಳವಣಿಗೆ. ನಾಗರಿಕ ಸಮಾಜದಲ್ಲಿ ಇದು ಭೀತಿಯನ್ನು ಮೂಡಿಸಿದೆ. ಫಾಝಿಲ್ ಕೊಲೆಗೆ ವಿಎಚ್ ಪಿ, ಬಿಜೆಪಿ ಮುಖಂಡರ ಬೆಂಬಲ ದೊರಕಿರುವ ಅನುಮಾನ ಕೊಲೆ ನಡೆದ ಸಂದರ್ಭದಲ್ಲೇ ವ್ಯಕ್ತವಾಗಿತ್ತು. ಪೊಲೀಸರು ರಾಜಕೀಯ ಒತ್ತಡದಿಂದ ಕೊಲೆಯ ಪಿತೂರಿದಾರರನ್ನು ರಕ್ಷಿಸುತ್ತಿದ್ದಾರೆ ಎಂದು ಫಾಝಿಲ್ ಕುಟುಂಬ ಆರೋಪಿಸಿತ್ತು. ಶರಣ್ ಪಂಪ್‌ವೆಲ್ ಭಾಷಣ ಈ ಅನುಮಾನವನ್ನು ಎಡೆಯಿಲ್ಲದಂತೆ ಪುಷ್ಟೀಕರಿಸಿದೆ ಎಂದು ಅವರು ಹೇಳಿದ್ದಾರೆ.

ಮುಸ್ಲಿಮ್ ಒಕ್ಕೂಟ ಖಂಡನೆ

ಶರಣ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ ಮುಸ್ಲಿಮ್ ಒಕ್ಕೂಟದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಕೆ. ಅಶ್ರಫ್, VHP ಪ್ರೇರಿತ ತುತ್ತೂರಿ ಸೇವಕ ಶರಣ್‌ನ ಮೂಲಕ,ಮುಂದಿನ
ತನ್ನ ರಾಜಕೀಯ ಅಸ್ತಿತ್ವದ
ಬೆಳವಣಿಗೆಗಳ ನ್ನು ಗುರಿಯಾಗಿಸಿ ‘ಬಜರಂಗದಳ ಶೌರ್ಯ ಯಾತ್ರೆ ಹೆಸರಿನಲ್ಲಿ ಕರ್ನಾಟಕದಾದ್ಯಂತ ಮತೀಯ ಪ್ರಚೋದನೆಯನ್ನು ಸೃಷ್ಟಿಸುವ ಹುನ್ನಾರದಿಂದ ಪ್ರಚೋದನಕಾರಿ ಹೇಳಿಕೆಗಳಿಗೆ ನಾಂದಿ ಹಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದರ ಭಾಗವಾಗಿ ಗುಜರಾತಿನ ಮುಸ್ಲಿಮರ ಹತ್ಯೆ ಸುರತ್ಕಲ್ ಫಾಝಿಲ್ ಹತ್ಯೆ, ತುಮಕೂರಿನಲ್ಲಿ ಸಂಭಾವ್ಯ ಗಲಭೆಗೆ ಪ್ರಚೋದನೆ, ಒಬ್ಬನನ್ನು ಮುಟ್ಟಿದರೆ ಹತ್ತು ಜನ ಆಸ್ಪತ್ರೆಯಲ್ಲಿ ಇರುತ್ತಾರೆ ಎಂಬ ಸಂಭಾವ್ಯ ಹಲ್ಲೆಗೆ ಪ್ರಚೋದನೆ, ‘ನಮ್ಮ ಕೈಯಲ್ಲಿ ತಲವಾರು ಇರುತ್ತದೆ’ ಎಂಬ ಅಪರಾಧಕ್ಕೆ ಪ್ರೇರಣೆ ಹೊಂದುವಂತಹ ಹೇಳಿಕೆಯನ್ನು ಸಾರ್ವಜನಿಕವಾಗಿ ಮತ್ತು ಮುಕ್ತವಾಗಿ ಕಾನೂನಿನ ಏಜೆಂಟ್ ಗಳ ಸಮಕ್ಷಮವೇ ನೀಡಿರುತ್ತಾರೆ. ಶರಣ್ ಎಂಬ ವಿ.ಎಚ್.ಪಿ ಏಜೆಂಟ್ ನ ಮುಖಾಂತರ ಕರ್ನಾಟಕದಾದ್ಯಂತ ಈ ರೀತಿಯಲ್ಲಿ ಗಲಭೆಗೆ ಮುನ್ನುಡಿ ಬರೆಯಲಾಗುತ್ತದೆ. ಮುಂದಿನ ದಿನಗಳಲ್ಲಿ ಗಲಭೆ ಸ್ಫೋಟಗೊಂಡರೆ ಅದಕ್ಕೆ ಮುಖ್ಯ ಕಾರಣ ಈ ಹೇಳಿಕೆ ಗಳಿಂದಲೆ ಎಂಬುದನ್ನು ವಿವೇಚಿಸಿ ಪೊಲೀಸರು ತಕ್ಷಣ ಪ್ರಕರಣ ದಾಖಲಿಸಬೇಕಿದೆ. ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಶರಣ್‌ನನ್ನು ಕೂಡಲೇ ಬಂಧಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

Join Whatsapp
Exit mobile version