ನವದೆಹಲಿ : ದಲಿತರು, ಮುಸ್ಲಿಮರು, ಕ್ರೈಸ್ತರ ವಿರುದ್ಧ ಯದ್ವಾತದ್ವಾ ದ್ವೇಷ ಮಾತುಗಳನ್ನಾಡಿದ್ದ ಜುನಾ ಅಖಾಡದ ಧಾರ್ಮಿಕ ಮುಖಂಡ ಯತೀಂದ್ರನಾಥ್ ಗಿರಿ ವಿರುದ್ಧ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಧಾರ್ಮಿಕ ಮುಖಂಡ ಯತೀಂದ್ರನಾಥ್ ಗಿರಿ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಟ್ವಿಟರ್ ನಲ್ಲಿ ಟ್ರೆಂಡ್ ಕೂಡ ಆಗಿದೆ. #ArrestYatindraNathGiri ಹ್ಯಾಶ್ ಟ್ಯಾಗ್ ದೇಶಾದ್ಯಂತ ಟ್ರೆಂಡ್ ಆಗಿದೆ.
ಹಿಂದಿ ವೆಬ್ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಗಿರಿ ದಲಿತರು, ಮುಸ್ಲಿಮರು, ಕ್ರೈಸ್ತರ ವಿರುದ್ಧ ದ್ವೇಷದ ಮಾತುಗಳನ್ನಾಡಿದ್ದಾರೆ. ದಲಿತರಿಗೆ ಮೀಸಲಾತಿ ನೀಡುವ ಸಂವಿಧಾನವನ್ನು ಬದಲಾಯಿಸಬೇಕು, ಭಾರತೀಯ ವೈದ್ಯಕೀಯ ಸಂಘ (ಐಎಂಎ) ಮತ್ತು ಮದ್ರಸಾಗಳಿಗೆ ನಿಷೇಧ ಹೇರಬೇಕು ಎಂದು ಅವರು ದಲಿತರು, ಮುಸ್ಲಿಮರು, ಕ್ರೈಸ್ತರ ವಿರುದ್ಧ ವಿಷಕಾರಿದ್ದಾರೆ.
ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವುದು ಕ್ರಿಮಿನಲ್ ಅಪರಾಧವಾಗಿಸುವ ಹೊಸ ಕಾನೂನು ರೂಪಿಸಬೇಕು. ಭಾರತೀಯ ವೈದ್ಯಕೀಯ ಸಂಘವನ್ನು ಕ್ರೈಸ್ತ ಸಂಘಟನೆ ಎಂದು ಪ್ರತಿಪಾದಿಸಿರುವ ಗಿರಿ, ಅದನ್ನು ವಿಸರ್ಜಿಸಬೇಕು ಎಂದು ಒತ್ತಾಯಿಸಿದ್ದಾರೆ. ಕೋವಿಡ್ ಸೇರಿದಂತೆ ಎಲ್ಲಾ ರೋಗಕ್ಕೂ ಚಿಕಿತ್ಸೆ ನೀಡಲು ಆಯುರ್ವೇದ ಶಕ್ತವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಮುಸ್ಲಿಮರ ಧಾರ್ಮಿಕ ಶಾಲೆಗಳಾದ ಮದ್ರಸಾಗಳಿಗೆ ನಿಷೇಧ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಗಿರಿಯವರ ಹೇಳಿಕೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಗಿರಿ ಅವರನ್ನು ಬಂಧಿಸುವಂತೆ ಒತ್ತಾಯ ಕೇಳಿಬಂದಿದೆ.