ನವದೆಹಲಿ: ವಕ್ಫ್ (ತಿದ್ದುಪಡಿ) ಕಾಯ್ದೆಯ ಪ್ರಯೋಜನಗಳನ್ನು ಪ್ರಚಾರ ಮಾಡಲು ಹಾಗೂ ಕಾಯ್ದೆ ಕುರಿತು ವಿಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಲು, ಬಿಜೆಪಿಯು ರಾಷ್ಟ್ರದಾದ್ಯಂತ ಏ.20ರಿಂದ 15 ದಿನಗಳ ಸಾರ್ವಜನಿಕ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ.
ವಿಶೇಷವಾಗಿ ಮುಸ್ಲಿಮರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ಯೋಜಿಸಲಾಗಿದೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಗುರುವಾರ ತಿಳಿಸಿದರು.
ಇಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಪಕ್ಷದ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ ನಡ್ಡಾ, ‘ಬಡ ಮುಸ್ಲಿಮರು ಮತ್ತು ಮಹಿಳೆಯರ ಕಲ್ಯಾಣಕ್ಕಾಗಿ ವಕ್ಫ್ ಆಸ್ತಿಗಳನ್ನು ಬಳಸಿಕೊಳ್ಳಲು ತಿದ್ದುಪಡಿ ಮಾಡಲಾದ ಕಾಯ್ದೆಯಿಂದ ಅನುಕೂಲ ಆಗಲಿದೆ. ಅಲ್ಲದೇ, ಕೆಲವಷ್ಟೇ ಪ್ರಭಾವಿ ಜನರು ವಕ್ಫ್ ಆಸ್ತಿಯ ನಿಯಂತ್ರಣ ಹೊಂದುವುದು ತಪ್ಪಲಿದೆ. ಆಸ್ತಿಯು ಅಲ್ಪಸಂಖ್ಯಾತ ಸಮುದಾಯದ ಒಟ್ಟಾರೆ ಪ್ರಯೋಜನಕ್ಕಾಗಿ ಬಳಕೆಯಾಗುತ್ತದೆ’ ಎಂದು ಹೇಳಿದರು.
ಮೇ.5ರಂದು ಮುಕ್ತಾಯಗೊಳ್ಳಲಿರುವ ಅಭಿಯಾನದ ನೇತೃತ್ವವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರವಾಲ್ ಹಾಗೂ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ದೀಕ್ ಅವರು ವಹಿಸಿಕೊಳ್ಳಲಿದ್ದಾರೆ. ಮುಸ್ಲಿಂ ಸಮುದಾಯದವರೊಂದಿಗೆ ಸಭೆ ಹಾಗೂ ಸುದ್ದಿಗೋಷ್ಠಿಗಳನ್ನು ನಡೆಸಲು ಬಿಜೆಪಿ ಯೋಜಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.