ಮಂಗಳೂರು: ವಿದ್ಯಾರ್ಥಿ ನಾಯಕನಾಗಿದ್ದಾಗಲೇ ಕೋಮುವಾದಿಗಳ ಬೆದರಿಕೆಯನ್ನು ಎದುರಿಸಿ ಬಂದಿದ್ದೇನೆ. ಇಂತಹವರ ಬೆದರಿಕೆಗಳಿಗೆ ತಲೆಕೆಡಿಸಿಕೊಂಡು ಸಮಯ ವ್ಯರ್ಥ ಮಾಡಲು ನನಗಿಷ್ಟವಿಲ್ಲ. ಕೈಕಾಲು ತೆಗೆಯುತ್ತೇನೆ, ಖಬರಸ್ತಾನಕ್ಕೆ ಕಳುಹಿಸುತ್ತೇನೆ ಎನ್ನುವವರ ವಿಷಯವನ್ನು ದೇವರ ಮುಂದಿಟ್ಟಿದ್ದೇನೆ, ಈ ಬಗ್ಗೆ ದೇವರೇ ತೀರ್ಮಾನ ಕೈಗೊಳ್ಳುತ್ತಾನೆ ಎಂದು ಮಂಗಳೂರು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವೇಷವೇ ಕೆಲವು ಪಕ್ಷಗಳ ಡಿಎನ್ ಎ ಆಗಿದೆ. ಪರಸ್ಪರ ಎತ್ತಿಕಟ್ಟುವುದು, ಗಲಾಟೆ ಎಬ್ಬಿಸಿ ಯುವಕರನ್ನು ಜೈಲಿಗೆ ಕಳುಹಿಸುವುದು ಇಂತಹ ಪಕ್ಷಗಳ ಕೆಲಸವಾಗಿದೆ. ಸಮಾಜಘಾತುಕ ಶಕ್ತಿಗಳು, ಕೋಮುವಾದಿಗಳ ವಿರುದ್ಧ ಪೊಲೀಸರು ದಿಟ್ಟತನದಿಂದ ಸುಮೋಟೋ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ನಾನು ಎಲ್ಲಾ ಜಾತಿ, ಧರ್ಮದವರ ನಡುವೆ ಸೌಹಾರ್ದತೆಯ ಕೊಂಡಿಯಾಗಿರಲು ಬಯಸುತ್ತೇನೆ, ನನ್ನ ಕ್ಷೇತ್ರದ ಜನರಿಗೆ ಮೂಲಸೌಕರ್ಯ ಒದಗಿಸಿಕೊಡುವುದು, ಕ್ಷೇತ್ರದಲ್ಲಿ ಸೌಹಾರ್ದ ವಾತಾವರಣ ಸೃಷ್ಟಿಸುವುದೇ ನನ್ನ ಮೊದಲ ಆದ್ಯತೆಯಾಗಿದೆ ಎಂದು ಹೇಳಿದರು.
ಜಿಲ್ಲಾಧಿಕಾರಿಯ ಕಾಲರ್ ಪಟ್ಟಿ ಹಿಡಿಯುತ್ತೇನೆ, ಮಹಿಳಾ ಸಬ್ ಇನ್ಸ್ ಪೆಕ್ಟರ್ ರ ಕೈಕಾಲು ಮುರಿಯುತ್ತೇನೆ ಎಂದು ಸಮಾಜಘಾತುಕ ಶಕ್ತಿಗಳಿಗೆ ಹೇಳಲು ಧೈರ್ಯ ಕೊಟ್ಟಿರುವುದೇ ಬಿಜೆಪಿ ಆಡಳಿತದ ಕೊಡುಗೆಯಾಗಿದೆ. ಪೊಲೀಸರ ಕೈ ಕಟ್ಟಿಹಾಕಿರುವುದರಿಂದ ಸಮಾಜಘಾತುಕ ಶಕ್ತಿಗಳಿಗೆ ಇಂತಹ ಹೇಳಿಕೆ ನೀಡಲು ಧೈರ್ಯ ಬಂದಿದೆ. ಪೊಲಿಟಿಕಲ್ ಬ್ಲಾಕ್ ಮೇಲ್ ಜಿಲ್ಲೆಯಲ್ಲಿ ಹೆಚ್ಚಿದ್ದು, ದಿಟ್ಟ ಕ್ರಮ ತೆಗೆದುಕೊಳ್ಳುವ ಅಧಿಕಾರಗಳನ್ನು ಎತ್ತಂಗಡಿ ಮಾಡಲಾಗುತ್ತಿದೆ. ಕರಾವಳಿಯಲ್ಲಿ ಇತ್ತೀಚಿನ ಕೆಲವು ಅಹಿತಕರ ಘಟನೆಗಳಿಗೆ ಆಡಳಿತ ಪಕ್ಷದ ಜನಪ್ರತಿನಿಧಿಗಳೇ ಕಾರಣರಾಗಿದ್ದಾರೆ ಎಂದು ಯು.ಟಿ.ಖಾದರ್ ಆರೋಪಿಸಿದರು.
ಪುತ್ತೂರಿನಲ್ಲಿ ನಡೆದ ಶಾಲಾ ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಪ್ರಸ್ತಾಪಿಸಿದ ಯು.ಟಿ.ಖಾದರ್, ಕ್ಯಾಂಪಸ್ ನೊಳಗೆ ಹೊರಗಿನವರು ಪ್ರವೇಶಿಸಿ ರಾಜಕೀಯ ಮಾಡುವುದು ಸರಿಯಲ್ಲ. ಇದರಿಂದ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ. ಯುವಕರ ಕೈಗೆ ಪೆನ್ನು ಪುಸ್ತಕದ ಬದಲು ಆಯುಧ ಕೊಡುವ ಕೆಟ್ಟ ಕೃತ್ಯಗಳು ನಡೆಯುತ್ತಿವೆ. ತ್ರಿಶೂಲ ದೀಕ್ಷೆಯ ಹೆಸರಿನಲ್ಲಿ ವಿದ್ಯಾರ್ಥಿಗಳ ಕೈಗೆ ಅಸ್ತ್ರಗಳನ್ನು ನೀಡಲಾಗುತ್ತಿದೆ. ತ್ರಿಶೂಲದಿಂದಲೇ ಹಲ್ಲೆಯಾಗಿದೆ ಎಂಬ ಆರೋಪ ಇದೆ. ಇದರ ಬಗ್ಗೆ ತನಿಖೆಯಾಗಬೇಕು. ಒಂದು ವೇಳೆ ತ್ರಿಶೂಲದಿಂದ ಹಲ್ಲೆಯಾಗಿದ್ದರೆ ಹಲ್ಲೆ ನಡೆಸಿದವರು ಮತ್ತು ತ್ರಿಶೂಲ ಕೊಟ್ಟವರ ಮೇಲೂ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕೆಲವರು ತ್ರಿಶೂಲವನ್ನು ಬಹಿರಂಗವಾಗಿ ಕೊಟ್ಟಿದ್ದಾರೆ. ಇದರಿಂದ ಇನ್ನು ಕೆಲವರು ಭದ್ರತೆಗಿರಲಿ ಎಂದು ಕದ್ದುಮುಚ್ಚಿ ಆಯುಧ ಕೊಡಬಹುದು, ಹೀಗಾದರೆ ನಾಡಿನ ಕಾನೂನು ಸುವ್ಯವಸ್ಥೆ ಎಲ್ಲಿಗೆ ಹೋಗಬಹುದು ? ಎಂದು ಖಾದರ್ ಆತಂಕ ವ್ಯಕ್ತಪಡಿಸಿದರು.
ಸುರತ್ಕಲ್ ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಾಗ ಬಿಜೆಪಿ ಶಾಸಕರೇ ಪೊಲೀಸರ ಮೇಲೆ ಪ್ರಭಾವ ಬೀರಿ ಸಣ್ಣ ಪುಟ್ಟ ಕಲಂನಡಿ ಪ್ರಕರಣ ದಾಖಲಾಗುವಂತೆ ಮಾಡಿದ್ದಾರೆ. ಐಪಿಸಿ 370 ಹಾಕುವ ಕಡೆ ತಕ್ಷಣ ಜಾಮೀನು ಸಿಗುವ ಪ್ರಕರಣ ದಾಖಲಿಸಿದ್ದಾರೆ. ಹೀಗೆ ಮಾಡಿದ್ದರಿಂದಲೇ ಸಮಾಜಘಾತುಕರಿಗೆ ಡಿಸಿಯ ಕಾಲರ್ ಪಟ್ಟಿ ಹಿಡಿಯುತ್ತೇನೆ ಎಂದು ಹೇಳುವ ಧೈರ್ಯ ಬಂತು ಎಂದು ವಾಗ್ದಾಳಿ ನಡೆಸಿದ ಖಾದರ್, ಜಿಲ್ಲೆಯಲ್ಲಿ ನಡೆದಿರುವ ಅಹಿತಕರ ಘಟನೆಗಳನ್ನು ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ. ಈ ಬಗ್ಗೆ ಮಾತನಾಡಲು ಅವಕಾಶ ನೀಡುವಂತೆ ಸ್ಪೀಕರ್ ಅವರಲ್ಲಿ ಸಮಯ ಕೇಳಿದ್ದೇನೆ ಎಂದು ಹೇಳಿದರು.
ಜಿಲ್ಲೆಯ ಕಾನೂನು ಸುವ್ಯವಸ್ಥೆ ಕಾಪಾಡಲು ಕೂಡಲೇ ಜಿಲ್ಲಾಡಳಿತ, ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಪೊಲೀಸ್ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆಗಳ ಸಭೆ ಕರೆಯಬೇಕು. ಗೃಹ ಸಚಿವರು ಜಿಲ್ಲೆಗೆ ಭೇಟಿ ನೀಡಿ ಇಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಪರಿಹಾರ ಸೂಚಿಸಬೇಕು ಎಂದು ಮಾಜಿ ಸಚಿವರು ಒತ್ತಾಯಿಸಿದರು.
ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅನ್ಯಾಯ
ಕೇಂದ್ರ ಸರಕಾರದ ಗೊಂದಲಮಯ ತೀರ್ಮಾನದಿಂದ, ತಪ್ಪು ನೀತಿ ಹಾಗೂ ಬದ್ಧತೆ ಇಲ್ಲದ ಕಾರಣ ಎಂಬಿಬಿಎಸ್ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಒತ್ತಡಕ್ಕೆ ಬಿದ್ದಿದ್ದಾರೆ, ಹೆತ್ತವರು ಖಿನ್ನತೆಗೆ ಒಳಗಾಗಿದ್ದಾರೆ. ಸ್ನಾತಕೋತ್ತರ ವಿದ್ಯಾರ್ಥಿಗಳ ಕೌನ್ಸಿಲಿಂಗ್ ಇನ್ನೂ ಆರಂಭಗೊಂಡಿಲ್ಲ. ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದಾಗ ದೇಶದಲ್ಲೇ ಮೊದಲ ಬಾರಿಗೆ ಬಡ ಮಕ್ಕಳು ಉನ್ನತ ಶಿಕ್ಷಣ ಪಡೆಯಲಿ ಎಂಬ ಉದ್ದೇಶಕ್ಕಾಗಿ ಸಿಇಟಿ ಜಾರಿಗೆ ತಂದಿತು. ರಾಜ್ಯ ಸರಕಾರವು ಕೂಡಲೆ ಕೇಂದ್ರವನ್ನು ಕಾಯದೆ ಇಲ್ಲಿ ಸಿಇಟಿ ಮೂಲಕವೇ ಪ್ರವೇಶ ನೀಡಲಿ. ಅಖಿಲ ಭಾರತಕ್ಕೆ ಬೇಕಾದರೆ ಪ್ರತ್ಯೇಕ ಪರೀಕ್ಷೆ ನಡೆಸಲಿ ಎಂದು ಖಾದರ್ ತಿಳಿಸಿದರು.
ನಮ್ಮ ಬಡ ಹುಡುಗರು ಪಿಯುಸಿಯಲ್ಲಿ 99% ಅಂಕ ಪಡೆದರೂ ಸಿರಿವಂತರು ಕೆಲವು ಕೋಚಿಂಗ್ ಗಳ ಮೂಲಕ ನೀಟ್ ಎಂದು ಕಡಿಮೆ ಅಂಕ ಪಡೆದಿದ್ದರೂ ವೈದ್ಯಕೀಯ ಸೀಟು ಪಡೆಯುತ್ತಿದ್ದಾರೆ. ಹಿಂದುಳಿದವರು ಮತ್ತು ಸಾಮಾನ್ಯ ವಿಭಾಗ ಎರಡಕ್ಕೂ ಎಂಟು ಲಕ್ಷದ ಆದಾಯದ ಮಿತಿ ಇಟ್ಟಿರುವುದು ಯಾವ ಲೆಕ್ಕ? 15 ಶೇಕಡಾ ದೇಶ ಮಟ್ಟದವರಿಗೆ ಇಟ್ಟು, ಇಲ್ಲಿ ಉಳಿದ 85% ಕೂಡಲೆ ಭರ್ತಿ ಮಾಡಬೇಕು. ಕೌನ್ಸಿಲಿಂಗ್ ಮಾಡದೆ ರಾಜ್ಯ ಸರಕಾರವು ಕೇಂದ್ರಕ್ಕೆ ಹೆದರಿ ಕುಳಿತಿರುವುದೇಕೆ ಎಂದು ಖಾದರ್ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸದಾಶಿವ ಉಲ್ಲಾಳ್, ನಜೀರ್ ಉಪಸ್ಥಿತರಿದ್ದರು.