ಬೆಂಗಳೂರು: ಕಳೆದ ಏಳು ದಿನಗಳಿಂದ ಸುಲಲಿತವಾಗಿ ನಡೆಯುತ್ತಾ ಬಂದಿದ್ದ ವಿಧಾನಪರಿಷತ್ ಕಲಾಪದಲ್ಲಿ ಬುಧವಾರ ಇದ್ದಕ್ಕಿದ್ದಂತೆ ಗದ್ದಲ ಉಂಟಾಗಿ ಕೋಲಾಹಲ ಸೃಷ್ಟಿಯಾಯಿತು.
ಅಧಿವೇಶನ ಆರಂಭವಾಗುತ್ತಿದ್ದಂತೆ ಆಡಳಿತ ಪಕ್ಷದ ಮುಖ್ಯ ಸಚೇತಕ ವೈ.ಎ.ನಾರಾಯಣಸ್ವಾಮಿ, ರವಿಕುಮಾರ್, ಪ್ರಾಣೇಶ್, ತೇಜಸ್ವಿನಿ ಮತ್ತಿತರರು ಎದ್ದುನಿಂತು ವಕ್ಫ್ ಆಸ್ತಿಗಳ ಒತ್ತುವರಿಗೆ ಸಂಬಂಧಪಟ್ಟಂತೆ ಅನ್ವರ್ ಮಾಣಿಪ್ಪಾಡಿ ಸಲ್ಲಿಸಿರುವ ವರದಿಯನ್ನು ಮಂಡಿಸಬೇಕು ಎಂದು ಒತ್ತಾಯಿಸಿದರು.
ಇದ್ದಕ್ಕಿದ್ದಂತೆ ಆಡಳಿತ ಪಕ್ಷದ ಎಲ್ಲಾ ಸದಸ್ಯರು ಎದ್ದುನಿಂತು ಏರಿದ ಧ್ವನಿಯಲ್ಲಿ ಒತ್ತಾಯಿಸಲಾರಂಭಿಸಿದ್ದಲ್ಲದೆ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಮೀಸಲಿಟ್ಟ ವಕ್ಫ್ ಆಸ್ತಿಗಳ ಒತ್ತುವರಿಯಾಗಿದೆ. ಇದನ್ನು ಸಮೀಕ್ಷೆ ಮಾಡಿ ಅನ್ವರ್ ಮಾಣಿಪ್ಪಾಡಿ ವರದಿ ಸಲ್ಲಿಸಿ ಎರಡು ವರ್ಷ ಆಗಿದೆ. ಸರ್ಕಾರ ಅದನ್ನು ಸದನದಲ್ಲಿ ಮಂಡನೆ ಮಾಡಬೇಕು. ವಕ್ಫ್ ಸಚಿವರು ಅಧಿವೇಶನದಲ್ಲೇ ಇದ್ದಾರೆ. ವರದಿ ಮಂಡನೆಗೆ ಸಭಾಪತಿ ಅವರು ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಸದಸ್ಯರು ಏರಿದ ಧ್ವನಿಯಲ್ಲಿ ಗಲಾಟೆ ಮಾಡಿದಾಗ ಪ್ರತಿಪಕ್ಷದ ಭಾಗದಿಂದಲೂ ಸದಸ್ಯರು ಎದ್ದು ನಿಂತು, ಮೊದಲು ಪ್ರಶ್ನೋತ್ತರ ನಡೆಯಲಿ. ಮೊದಲಿನಿಂದಲೂ ಇದೇ ಸಂಪ್ರದಾಯ ನಡೆದುಕೊಂಡು ಬಂದಿದೆ. ಒಂದು ವೇಳೆ ಆಡಳಿತ ಪಕ್ಷದವರಿಗೆ ಗಲಾಟೆ ಅಥವಾ ಮಾತನಾಡಲು ಮಾಡಲು ಅವಕಾಶ ಕೊಟ್ಟರೆ ಅದು ಕೆಟ್ಟ ಸಂಪ್ರದಾಯವಾಗಲಿದೆ. ಮುಂದಿನ ದಿನಗಳಲ್ಲಿ ಇದು ಪುನಾರವರ್ತನೆಯಾಗುತ್ತದೆ ಎಂದು ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಸೇರಿದಂತೆ ಹಲವು ಸದಸ್ಯರು ಎಚ್ಚರಿಸಿದರು.
ಸಭಾಪತಿಯವರು ಎರಡು ಕಡೆಯ ಶಾಸಕರನ್ನು ಸಮಾಧಾನಪಡಿಸುವ ಯತ್ನ ಮಾಡಿ, ಆಡಳಿತ ಪಕ್ಷದವರೇ ವಿರೋಧ ಪಕ್ಷದವರಂತೆ ಕೆಲಸ ಮಾಡಿದರೆ ವಿರೋಧ ಪಕ್ಷದವರು ಏನು ಮಾಡಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಲ್ಲರೂ ಗಲಾಟೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. ಒಬ್ಬೊಬ್ಬರಾಗಿ ತಾಳ್ಮೆಯಿಂದ ವಿಷಯ ಏನೇಂದು ಹೇಳಿ. ಆಡಳಿತ ಪಕ್ಷದವರು ಪ್ರಸ್ತಾಪಿಸುತ್ತಿರುವ ವಿಚಾರಕ್ಕೆ ನೋಟಿಸ್ ನೀಡಿಲ್ಲ. ಹೀಗಾಗಿ ಯಾರಿಗೂ ನಾನು ಅವಕಾಶ ಕೊಟ್ಟಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಸಚೇತಕರಾದ ಪ್ರಕಾಶ್ ರಾಥೋಡ್, ಮೊದಲು ಪ್ರಶ್ನೋತ್ತರ ನಡೆಯಬೇಕು. ಇಲ್ಲವಾದರೆ ನಾವು ಮಂಡಿಸಿರುವ ಪಿಎಸ್ ಐ ನೇಮಕಾತಿ ಹಗಣರದ ವಿಚಾರ 330ರ ಅಡಿ ಚರ್ಚೆಗೆ ಮೊದಲು ಅವಕಾಶ ನೀಡಬೇಕು ಎಂದು ಪ್ರತಿಪಾದಿಸಿದರು.
ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಲು ಎದ್ದು ನಿಂತರಾದರೂ ಅದಕ್ಕೆ ಅವಕಾಶ ಸಿಗಲಿಲ್ಲ.
ಹರಿಪ್ರಸಾದ್ ಅವರು, ಇಲ್ಲಿ ಸರ್ಕಾರವೇ ಇಲ್ಲ. ಅದಕ್ಕಾಗಿ ಆಡಳಿತ ಪಕ್ಷದ ಸದಸ್ಯರೇ ಸರ್ಕಾರದ ವಿರುದ್ಧ ಗಲಾಟೆ ಮಾಡುತ್ತಿದ್ದಾರೆ. ಬಹುಶಃ ವಕ್ಫ್ ಆಸ್ತಿಯಲ್ಲಿ ಇವರಿಗೆ 40 ಪರ್ಸೆಂಟ್ ಸಿಕ್ಕಿರಲಿಕ್ಕಿಲ್ಲ ಎಂದು ಲೇವಡಿ ಮಾಡಿದಾಗ, ವೈ.ಎ.ನಾರಾಯಣಸ್ವಾಮಿ, ನಿಮ್ಮದು 85 ಪರ್ಸೆಂಟ್ ಸರ್ಕಾರ ಎಂದು ಪ್ರತ್ಯಾರೋಪಿಸಿದ್ದಲ್ಲದೆ, ಇದನ್ನು ರಾಜೀವ್ ಗಾಂಧಿ ಅವರೇ ಹೇಳಿದ್ದಾರೆ ಎಂದು ತಿರುಗೇಟು ನೀಡಿದರು.
ವಾದ-ವಿವಾದ ತೀವ್ರವಾದ ನಡುವೆ ಸಭಾಪತಿಯವರು ಚರ್ಚೆಗೆ ಬ್ರೇಕ್ ಹಾಕಿ ಪ್ರಶ್ನೋತ್ತರವನ್ನು ಕೈಗೆತ್ತಿಕೊಂಡರು.