ಉ.ಪ್ರದೇಶ: 543 ಲೋಕಸಭಾ ಸಂಸದರ ಪೈಕಿ ಉತ್ತರ ಪ್ರದೇಶ ರಾಜ್ಯವೊಂದರಿಂದಲೇ 80 ಸಂಸದರು ಆಯ್ಕೆಯಾಗುತ್ತಾರೆ. 2014 ಹಾಗೂ 2019ರ ಚುನಾವಣೆಯಲ್ಲಿ ಬಿಜೆಪಿಗೆ ಇದೇ ರಾಜ್ಯದಿಂದಲೇ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಅಪ್ನಾದಳ ಮೈತ್ರಿ ಇಲ್ಲಿ 80 ಸೀಟ್‌ಗಳ ಪೈಕಿ 64ರಲ್ಲಿ ಗೆಲುವು ಕಂಡಿತ್ತು. ಇನ್ನು ಸಮಾಜವಾದಿ ಪಕ್ಷ 5 ಸೀಟ್ ಗೆದ್ದಿದ್ದರೆ, ಕಾಂಗ್ರೆಸ್ ಕೇವಲ 1 ಸೀಟ್ ಜಯಿಸಿತ್ತು.
ಆದರೆ 2024ರ ಲೋಕಸಭಾ ಚುನಾವಣೆಯಲ್ಲಿ ಫಲಿತಾಂಶ ಬಿಜೆಪಿಗೆ ಭಾರೀ ನಿರಾಸೆ ತಂದೊಡ್ಡಿದೆ. ಇಂಡಿಯಾ ಮೈತ್ರಿಕೂಟ ಅಲ್ಲಿ ಕಮಾಲ್ ಮಾಡಿದೆ. ಈ ಮಧ್ಯೆ ಬಿಜೆಪಿಯ ನಿರಾಸಾದಾಯಕ ಫಲಿತಾಂಶಕ್ಕೆ ಕಾರಣವನ್ನು ಅಂದಾಜಿಸಲಾಗುತ್ತಿದೆ. ಯುಪಿಯಲ್ಲಿ ಇಂಡಿಯಾ ಒಕ್ಕೂಟದ ಶ್ರೇಷ್ಠ ನಿರ್ವಹಣೆ ಮತ್ತು ಬಿಜೆಪಿಯ ದೊಡ್ಡ ಹಿನ್ನಡೆಗೆ ಸ್ಥಳೀಯ ರಜಪೂತ ಸಮುದಾಯದಲ್ಲಿನ ಅಸಮಾಧಾನವೇ ಕಾರಣವಾಗಿದೆ ಎಂದು ಬಿಜೆಪಿ ಪರ ವಿಶ್ಲೇಷಣೆಗಾರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸರ್ಕಾರದಲ್ಲಿ ತಮ್ಮ ಪ್ರಾಬಲ್ಯ ಕಡಿಮೆ ಇದೆ, ಸರ್ಕಾರದಿಂದ ನಾವು ಕಡೆಗಣಿಸಲ್ಪಿಟ್ಟಿದ್ದೇವೆ ಎನ್ನುವುದು ಅವರ ಭಾವನೆಯಾಗಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಜನಸಂಖ್ಯೆಯ ಸುಮಾರು ಶೇ.10 ರಷ್ಟಿರುವ ರಜಪೂತರು ತಮ್ಮ ನಾಯಕರಿಗೆ ಹೆಚ್ಚಿನ ಲೋಕಸಭೆ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡಿದ್ದರು. ಮೊದಲ ಹಂತದಲ್ಲಿ ಮತದಾನ ನಡೆದ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಕೇವಲ ಒಬ್ಬ ರಜಪೂತ ಅಭ್ಯರ್ಥಿ ಕುನ್ವರ್ ಸರ್ವೇಶ್ ಸಿಂಗ್ ಅವರನ್ನು ಕಣಕ್ಕಿಳಿಸಿತ್ತು. ಅವರು ಮತದಾನದ ಒಂದು ದಿನ ಬಳಿಕ ನಿಧನರಾಗಿದ್ದರು. ಉಳಿದ ಎಂಟು ಕ್ಷೇತ್ರಗಳಲ್ಲಿ ಬಿಜೆಪಿಯಿಂದ ರಜಪೂತ ಅಭ್ಯರ್ಥಿಗಳಿರಲಿಲ್ಲ ಎಂದು ಆ ವಿಶ್ಲೇಷಣೆಗಾರರು ಗಮನ ಸೆಳೆದಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಸಹ್ರಾನ್‌ಪುರದಲ್ಲಿ ಬೃಹತ್ ಮಹಾಪಂಚಾಯತ್‌ಅನ್ನು ನಡೆಸಿ ತಮ್ಮ ಅಸಮಾಧಾನದ ಬಗ್ಗೆ ಧ್ವನಿಯೆತ್ತಿದ್ದರು. ರಜಪೂತರು ತಮ್ಮ ಕಾರ್ಮಿಕರು ಎನ್ನುವಂತೆ ಮಾತನಾಡುತ್ತಿದ್ದ ಕೇಂದ್ರ ಸಚಿವ ಹಾಗೂ ಜಾತಿಯಲ್ಲಿ ಜಾಟ್ ಆಗಿರುವ ಸಂಜೀವ್ ಬಲ್ಯಾನ್ ವಿರುದ್ಧ ಇವರು ತೊಡೆತಟ್ಟಿದ್ದರು. ಮುಜಾಫರ್‌ನಗರದ ಹಾಲಿ ಸಂಸದರಾಗಿದ್ದ ಅವರು ಈ ಬಾರಿಯೂ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು.
ಘಾಜಿಯಾಬಾದ್‌ನಲ್ಲಿ ಹಾಲಿ ಸಂಸದ ಮತ್ತು ನಿವೃತ್ತ ಆರ್ಮಿ ಜನರಲ್ ಜಾತಿಯಲ್ಲಿ ರಜಪೂತ್ ಆಗಿದ್ದ ವಿಕೆ ಸಿಂಗ್ ಅವರ ಬದಲು ಬನಿಯಾ ಸಮುದಾಯದ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಕ್ಕೆ ರಜಪೂತ ಸಮುದಾಯ ದೊಡ್ಡ ಮಟ್ಟದ ಅಸಮಾಧಾನ ಹೊರಹಾಕಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಚುನಾವಣಾ ರ್ಯಾಲಿಗಳು ಮತ್ತು ರೋಡ್‌ಶೋಗಳ ಸಮಯದಲ್ಲಿ ರಜಪೂತರನ್ನು ತಲುಪಲು ಪ್ರಯತ್ನಿಸಿದರೂ, ಅಸಮಾಧಾನವು ಮುಂದುವರಿದಂತೆ ಕಂಡುಬಂದಿತ್ತು. ಅದೀಗ ಫಲಿತಾಂಶದಲ್ಲಿ ಕಾಣುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.