Home ಟಾಪ್ ಸುದ್ದಿಗಳು ಉಡುಪಿ| ಮೀನು ಕದ್ದಳೆಂದು ಮರಕ್ಕೆ ಕಟ್ಟಿಹಾಕಿ ಮಹಿಳೆಗೆ ಥಳಿತ; ನಾಲ್ವರ ಬಂಧನ

ಉಡುಪಿ| ಮೀನು ಕದ್ದಳೆಂದು ಮರಕ್ಕೆ ಕಟ್ಟಿಹಾಕಿ ಮಹಿಳೆಗೆ ಥಳಿತ; ನಾಲ್ವರ ಬಂಧನ

0

ಮಹಿಳೆಗೆ ಥಳಿಸಿದ್ದು ಅನಾಗರಿಕ ವರ್ತನೆ ಎಂದ ಸಿಎಂ ಸಿದ್ದರಾಮಯ್ಯ

ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಕದ್ದಳೆಂದು ಆರೋಪಿಸಿ ಮಹಿಳೆಗೆ ಥಳಿಸಿದ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.

ಮೀನುಗಾರಿಕೆಗೆ ತೆರಳಿದ ಬೋಟಿನಿಂದ ಬಂದರಿನಲ್ಲಿ ಮೀನು ಖಾಲಿ ಮಾಡುತ್ತಿದ್ದ ಸಂದರ್ಭ, ಮಹಿಳೆ ದುಬಾರಿ ಸಿಗಡಿ ಮೀನನ್ನು ಕದ್ದಿದ್ದಾಳೆ. ಮೀನು ಕದ್ದಿದ್ದನ್ನು ವಿಚಾರಣೆ ಮಾಡಿದಾಗ ಆಕೆ ಒಪ್ಪಿಕೊಂಡಿಲ್ಲ ಎನ್ನಲಾಗಿದೆ. ಸ್ಥಳದಲ್ಲಿದ್ದ ಮರಕ್ಕೆ ಕಟ್ಟಿ ಹಾಕಿ ಬೋಟಿಗೆ ಸಂಬಂಧಪಟ್ಟವರು ಥಳಿಸಿದ್ದಾರೆ.

ಈ ವಿಡಿಯೋದಲ್ಲಿ ಉದ್ರಿಕ್ತ ಗುಂಪು ಮಹಿಳೆಗೆ ಕಪಾಳ ಮೋಕ್ಷ ಮಾಡುವುದನ್ನು ಕಾಣಬಹುದಾಗಿದೆ. ಬಳಿಕ ಮರಕ್ಕೆ ಕಟ್ಟಿ ಹಾಕಿ ಮತ್ತೆ ಹಲ್ಲೆ ನಡೆಸಿದ್ದಾರೆ. ಪಕ್ಕದಲ್ಲಿದ್ದವರು ಯಾರೂ ತಡೆಯಲು ಮುಂದಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆಕೆ ವಿಜಯನಗರ ಜಿಲ್ಲೆಯ ನಿವಾಸಿಯಾಗಿದ್ದು,ಮೀನು ಕಳ್ಳತನ ಮಾಡುತ್ತಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆಕೆಯ ಮೇಲೆ ಹಲ್ಲೆ ನಡೆಸಿದ ಮಹಿಳೆಯನ್ನು ಲಕ್ಷ್ಮಿ ಬಾಯಿ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಕೆಯ ಜೊತೆಗೆ ಸುಂದರ್, ಶಿಲ್ಪಾ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್ ತಿಳಿಸಿದ್ದಾರೆ.

ಘಟನೆಯಲ್ಲಿ ಭಾಗಿಯಾಗಿರುವ ಇತರರನ್ನು ಗುರುತಿಸಲು ಮತ್ತು ಬಂಧಿಸಲು ಪೊಲೀಸರು ವೀಡಿಯೊಗಳನ್ನು ವಿಶ್ಲೇಷಿಸುತ್ತಿದ್ದಾರೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಉಡುಪಿ ಜಿಲ್ಲಾಧಿಕಾರಿ ಕೆ. ವಿದ್ಯಾ ಕುಮಾರಿ, ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಕಾನೂನು ಮತ್ತು ನೈತಿಕವಾಗಿ ಇಂತಹ ಕೃತ್ಯಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಮಹಿಳೆ ಕಳ್ಳತನ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದರ ಕುರಿತ ತನಿಖೆ ನಡೆಸಲಾಗುತ್ತಿದೆ. ಆದರೆ ಸಾರ್ವಜನಿಕವಾಗಿ ಹಲ್ಲೆ ಮಾಡುವುದು ಅಮಾನವೀಯವಾಗಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಎಸ್ಪಿಗೆ ಸೂಚಿಸಲಾಗಿದ್ದು, ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್ಸ್ ನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಗೆ ಮಹಿಳೆಯನ್ನು ಕರೆತಂದು ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮಹಿಳೆ ತಾನು ಕದ್ದಿರುವುದಾಗಿ ಒಪ್ಪಿಕೊಂಡು, ದಂಡ ಕಟ್ಟಿದ್ದಾಳೆ. ಬೋಟ್‌ನ ಮಾಲೀಕರು ಮತ್ತು ಮಹಿಳೆಗೆ ಸಂಬಂಧಪಟ್ಟವರು ಕುಳಿತು ರಾಜಿ ಪಂಚಾಯಿತಿ ನಡೆಸಿ ವಾಪಸ್ಸಾಗಿದ್ದಾರೆ.

ಘಟನೆಗೆ ಸಿಎಂ ಸಿದ್ದರಾಮಯ್ಯ ಖಂಡನೆ ವ್ಯಕ್ತಪಡಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಸಿಎಂ, ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೀನು ಕಳ್ಳತನ ಮಾಡಿದ್ದಾರೆಂದು ಆರೋಪಿಸಿ ಮಹಿಳೆಯೊಬ್ಬರನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ತಳಿಸಿದ ವೀಡಿಯೋ ಕಂಡು ದಿಗ್ಭ್ರಮೆಯಾಯಿತು. ಕಾರಣವೇನೇ ಇರಲಿ ಒಬ್ಬ ಮಹಿಳೆಯನ್ನು ಈ ರೀತಿ ಕೈಕಾಲು ಕಟ್ಟಿ ಹಲ್ಲೆ ಮಾಡುವುದು ಅಮಾನವೀಯ ಮಾತ್ರವಲ್ಲ, ಗಂಭೀರ ಅಪರಾಧವೂ ಹೌದು. ಇಂತಹ ಅನಾಗರಿಕ ವರ್ತನೆ ಕರ್ನಾಟಕದಂತಹ ಸುಸಂಸ್ಕೃತ ನಾಡಿಗೆ ತಕ್ಕುದಾದುದ್ದಲ್ಲ. ಕಳ್ಳತನ, ಮೋಸ, ವಂಚನೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮಕ್ಕೆ ನಮ್ಮಲ್ಲಿ ಪೊಲೀಸ್ ಇಲಾಖೆ, ಕಾನೂನು ವ್ಯವಸ್ಥೆ ಎಲ್ಲವೂ ಇದೆ. ದೂರು ದಾಖಲಿಸಿದರೆ ಪೊಲೀಸರು ತನಿಖೆ ನಡೆಸಿ, ಕಾನೂನಿನಡಿಯಲ್ಲಿ ಶಿಕ್ಷಿಸಲು ಸಮರ್ಥರಿರುವಾಗ ಹೀಗೆ ಸಾರ್ವಜನಿಕರು ಕಾನೂನು ಕೈಗೆತ್ತಿಕೊಳ್ಳುವುದನ್ನು ಸರ್ಕಾರ ಸಹಿಸುವುದಿಲ್ಲ. ಈ ಘಟನೆಯ ಕುರಿತು ಸೂಕ್ತ ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಘಟನೆಯನ್ನು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಖಂಡಿಸಿದ್ದಾರೆ. ಸಣ್ಣ ತಪ್ಪು ಮಾಡಿದ್ದಕ್ಕೆ ಈ ರೀತಿ ಹಲ್ಲೆ ಮಾಡಿರೋದು ತಪ್ಪು. ಹಲ್ಲೆ ನಡೆಸುವವರು ಒಂದು ಕಡೆಯಾದ್ರೆ ಉಳಿದವರು ನಗುತ್ತ ನಿಂತಿದ್ರು. ಯಾರು ಕೂಡ ಹಲ್ಲೆ ತಡೆಯುವ ಪ್ರಯತ್ನ ಮಾಡಲಿಲ್ಲ. ಜನರ ಮನಸ್ಥಿತಿ ಈ ರೀತಿಯಾದರೆ ಕಷ್ಟ. ಯಾರಿಗೋ ಒಬ್ಬರಿಗೆ ಹಿಂಸೆಯಾಗುವಾಗ ನಾವು ನಗುವುದು ತಪ್ಪು. ನಾವು ಎತ್ತ ಸಾಗುತ್ತಿದ್ದೇವೆ ಅನ್ನೋ ಪ್ರಶ್ನೆ ಕಾಡುತ್ತಿದೆ. ಈಗಾಗಲೇ ಉಡುಪಿ ಎಸ್‌ಪಿ ಯವರಿಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ಸೂಚಿಸಿದ್ದೇನೆ. ಇನ್ನೆಂದೂ ಇಂತಹ ಘಟನೆಗಳು ಮರುಕಳಿಸಬಾರದು ಎಂದು ಪ್ರತಿಕ್ರಿಯಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version