ಬೆಂಗಳೂರು: ತ್ರಿಪುರಾ ಹಿಂಸಾಚಾರದ ಬಗ್ಗೆ ಸತ್ಯಶೋಧನಾ ವರದಿ ತಯಾರಿಸಲು ತೆರಳಿದ್ದ ತಂಡದಲ್ಲಿದ್ದ ವಕೀಲರಿಬ್ಬರಿಗೆ UAPA ಕಾಯ್ದೆಯಡಿ ನೋಟೀಸು ನೀಡಿರುವುದನ್ನು ಖಂಡಿಸಿ ‘ನ್ಯಾಯಕ್ಕಾಗಿ ಅಖಿಲ ಭಾರತ ವಕೀಲರ ಸಂಘ’ದ(AILAJ) ಕರ್ನಾಟಕ ರಾಜ್ಯ ಘಟಕವು ಪ್ರತಿಭಟನೆ ನಡೆಸಿದೆ.
ತ್ರಿಪುರಾ ಹಿಂಸಾಚಾರದ ಬಗ್ಗೆ ಸತ್ಯ ಶೋಧನಾ ವರದಿ ಬಿಡುಗಡೆ ಮಾಡಿದ್ದ ತಂಡದಲ್ಲಿದ್ದ ಇಬ್ಬರು ವಕೀಲರಾದ ದೆಹಲಿ ಮೂಲದ ಮುಖೇಶ್ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳ (NCHRO) ಅನ್ಸಾರ್ ಇಂದೋರಿ ಅವರಿಗೆ ನೋಟೀಸು ಕಳುಹಿಸಲಾಗಿದ್ದು, ನವೆಂಬರ್ 10 ರೊಳಗೆ ಪಶ್ಚಿಮ ಅಗರ್ತಲಾ ಪೊಲೀಸ್ ಠಾಣೆಗೆ ಹಾಜರಾಗುವಂತೆ ಅವರಿಗೆ ನಿರ್ದೇಶನ ನೀಡಲಾಗಿತ್ತು.
ಆ ನೋಟಿಸ್ನಲ್ಲಿ ‘ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿರುವ ಕಲ್ಪಿತ ಮತ್ತು ಸುಳ್ಳು ಹೇಳಿಕೆಗಳು/ ಕಾಮೆಂಟ್ಗಳನ್ನು ತಕ್ಷಣವೇ ಅಳಿಸಬೇಕು’ ಎಂದು ತಿಳಿಸಲಾಗಿತ್ತು.
ಮುಖೇಶ್ ಮತ್ತು ಇಂದೋರಿ ವಿರುದ್ಧ ಯುಎಪಿಎ ಹೊರತಾಗಿ IPC ಯ ಹಲವಾರು ಸೆಕ್ಷನ್ ಗಳು, 153-A ಮತ್ತು B, 469, 503, 504 ಮತ್ತು 120B ಸೇರಿದಂತೆ ಇತರ ಆರೋಪಗಳನ್ನು ಹೊರಿಸಲಾಗಿದೆ.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಪರವಾಗಿ ಸುಪ್ರೀಂ ಕೋರ್ಟ್ ವಕೀಲ ಎಹ್ತೇಶಾಮ್ ಹಶ್ಮಿ, ಡೆಮಾಕ್ರಸಿ ಪರ ವಕೀಲರಾದ ಅಮಿತ್ ಶ್ರೀವಾಸ್ತವ್, ವಕೀಲರಾದ ಅನ್ಸಾರ್ ಇಂದೋರಿ ಮತ್ತು ಮುಖೇಶ್ ಅವರನ್ನೊಳಗೊಂಡ ತಂಡವು ತ್ರಿಪುರಾದಲ್ಲಿ ಮುಸ್ಲಿಮರ ವಿರುದ್ಧದ ಕೋಮು ಹಿಂಸಾಚಾರದ ಕುರಿತು ತಮ್ಮ ಸಂಶೋಧನಾ ವರದಿಯನ್ನು ಬಿಡುಗಡೆ ಮಾಡಿತ್ತು.