ದುಬೈ: ಅಲ್ ಮಿನ್ ಹಾದ್ ಜಿಲ್ಲೆಯ ಹೆಸರನ್ನು ‘ಹಿಂದ್ ಸಿಟಿ’ ಎಂದು ದುಬೈ ದೊರೆ ಮತ್ತು ಯುಎಇ ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಂ ಅವರು ನಾಮಕರಣ ಮಾಡಿದ್ದಾರೆ ಎಂದು ಅರಬ್ ಅಮೀರರ ಒಕ್ಕೂಟದ ಅಧಿಕೃತ ಸುದ್ದಿ ಸಂಸ್ಥೆ ‘ವಾಮ್’ ವರದಿ ಮಾಡಿದೆ.
83.9 ಕಿಲೋಮೀಟರ್ ವಿಸ್ತೀರ್ಣದ ಹಿಂದ್ ಸಿಟಿಯು ನಾಲ್ಕು ವಲಯಗಳನ್ನು ಹೊಂದಿದೆ. ಹಿಂದ್ 1, 2, 3, 4 ಎಂದು ಈ ವಲಯಗಳಿವೆ ಎಂದೂ ‘ವಾಮ್’ ವರದಿ ಮಾಡಿದೆ.
ಎಮಿರೇಟ್ಸ್ ರಸ್ತೆ, ದುಬೈ ಅಲ್ ಐನ್ ರೋಡ್, ಜಬೆಲ್ ಅಲಿ ಲೆಹ್ಬಾಬ್ ರಸ್ತೆ ಹಿಂದ್ ಸಿಟಿಯ ಪ್ರಮುಖ ರಸ್ತೆಗಳಾಗಿವೆ. ದುಬೈ ದೊರೆ ಸೂಚನೆಯ ಮೇಲೆ ಅಲ್ ಮಿನ್ಹಾದ್ ಮತ್ತು ನೆರೆಯ ಸ್ಥಳಗಳನ್ನು ಹಿಂದ್ ಸಿಟಿಯಾಗಿ ಘೋಷಿಸಲಾಗಿದೆ.
ಅಬುದಾಬಿಯ ದೊರೆ ಯುಎಇ ಅಧ್ಯಕ್ಷರಾಗಿದ್ದ ಶೇಖ್ ಖಲೀಫಾ ಬಿನ್ ಜಾಯೇದ್ ಅಲ್ ನಹ್ಯಾನ್ ಅವರು 2022ರ ಮೇ 13ರಂದು ಮೃತಪಟ್ಟಿದ್ದರು. ಬುರ್ಜ್ ದುಬೈ ಎಂದಿದ್ದುದನ್ನು ಅವರ ಗೌರವಾರ್ಥ 2010ರಲ್ಲಿ ಬುರ್ಜ್ ಖಲೀಫಾ ಎಂದು ಹೆಸರು ಬದಲಿಸಲಾಗಿತ್ತು.
ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಂ ಅವರು ದೇಶದ ನಾಲ್ಕು ಮುಖ್ಯ ಹುದ್ದೆಗಳಾದ ಉಪಾಧ್ಯಕ್ಷರು, ಪ್ರಧಾನಿ ಮತ್ತು ರಕ್ಷಣಾ ಸಚಿವರೂ ಆಗಿದ್ದಾರೆ. ಅವರು ದುಬೈ ದೊರೆಯೂ ಆಗಿದ್ದು, ಅವರ ಅಣ್ಣ ಮಖ್ತೂಂ ಬಿನ್ ರಶೀದ್ ಅಲ್ ಮಖ್ತೂಂ ಮರಣದ ಬಳಿಕ ದೊರೆಯಾಗಿ ನೇಮಕಗೊಂಡಿದ್ದರು.
ದುಬೈಯ ನೀಲ ನಕ್ಷೆ, ನಗರಾಭಿವೃದ್ಧಿಯಲ್ಲಿ ಶೇಖ್ ಮುಹಮ್ಮದ್ ಬಿನ್ ರಶೀದ್ ಅಲ್ ಮಖ್ತೂಂ ಅವರ ಶ್ರಮ ಅಪಾರವಾದುದು. ಅವರು ಜಗತ್ತಿನ ಪ್ರಖ್ಯಾತ ರಿಯಲ್ ಎಸ್ಟೇಟ್ ಡೆವಲಪರ್ ಸಹ ಆಗಿದ್ದಾರೆ.