Home ಕರಾವಳಿ ಬೆಳ್ತಂಗಡಿ| ಆದಿವಾಸಿ ಸಮುದಾಯದ ಮುಖಂಡನನ್ನು ಅವಮಾನಿಸಿದ ಶಾಸಕ ಹರೀಶ್ ಪೂಂಜಾ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ| ಆದಿವಾಸಿ ಸಮುದಾಯದ ಮುಖಂಡನನ್ನು ಅವಮಾನಿಸಿದ ಶಾಸಕ ಹರೀಶ್ ಪೂಂಜಾ ವಿರುದ್ಧ ಪ್ರತಿಭಟನೆ

ಬೆಳ್ತಂಗಡಿ: ಆದಿವಾಸಿ( ಮಲೆಕುಡಿಯ)ಸಮುದಾಯದ ಮುಖಂಡ ಜಯಾನಂದ ಪಿಲಿಕಳ ಅವರಿಗೆ ಕಪಾಳ ಮೋಕ್ಷ ಮಾಡುವುದಾಗಿ ಬೆದರಿಕೆಯೊಡ್ಡಿದ ಶಾಸಕ ಹರೀಶ್ ಪೂಂಜಾ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮೂಲನಿವಾಸಿ ಮಲೆಕುಡಿಯರ ಸಂಘ, ಅಧಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ವಿವಿದ ಸಂಘಟನೆಗಳ ಕಾರ್ಯಕರ್ತರು ಬೆಳ್ತಂಗಡಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದಾರೆ.


ದಬ್ಬಾಳಿಕೆ ನಡೆಸಿ ಅವಮಾನ ಮಾಡಿದ ಶಾಸಕ ಹಾಗೂ ಈ ಬಗ್ಗೆ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿರುವ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಅದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಎಸ್ ವೈ ಗುರುಶಾಂತ್, ಶೋಷಿತ ಸಮುದಾಯವನ್ನು ಮತ್ತಷ್ಟು ಶೋಷಿಸಲು ಶಾಸಕರು ಮುಂದಾಗಿದ್ದಾರೆ. ಜಯಾನಂದ ಅವರ ಮೇಲೆ ನಡೆದ ಹಲ್ಲೆ ಯತ್ನ ಮಲೆಕುಡಿಯ ಸಮುದಾಯದ ಮೇಲೆ ನಡೆದ ದಾಳಿಯಾಗಿದೆ.ಶಾಸಕರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದು, ಕೂಡಲೇ ಸರಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಿಜೆಪಿಯಲ್ಲಿ ಕ್ರಿಮಿನಲ್ ಗಳೇ ತುಂಬಿದ್ದಾರೆ, ಅದನ್ನೇ ಬೆಳ್ತಂಗಡಿ ಯಲ್ಲಿ ತೋರಿಸುತ್ತಿದ್ದಾರೆ. ಯಾರಿಗೂ ಅಧಿಕಾರ ಶಾಶ್ವತವಲ್ಲ ಹರೀಶ್ ಪೂಂಜ ಅವರೇ ನಿಮಗೆ ಜನರೇ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ. ಹೋರಾಟದ ಮುಂದಿನ ಭಾಗವಾಗಿ ಮಾನವ ಹಕ್ಕುಗಳ ಆಯೋಗಕ್ಕೆ, ರಾಷ್ಟ್ರಪತಿಯವರಿಗೆ ದೂರು ನೀಡಲಿದ್ದೇವೆ. ನ್ಯಾಯಕ್ಕಾಗಿ ಎಲ್ಲರೂ ಧ್ವನಿಯೆತ್ತಬೇಕಾಗಿದೆ ಎಂದರು.
ಮಾಜಿ ಸಚಿವ ಕೆ ಗಂಗಾಧರ ಗೌಡ ಮಾತನಾಡಿ ಪೊಲೀಸರು ಯಾವುದೋ ನೆಪಗಳನ್ನು ಹೇಳಿ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಶಾಸಕರ ಸರ್ವಾಧಿಕಾರಕ್ಕೆ ಬೆಂಬಲ ನೀಡುತ್ತಿರುವುದು ದುರಂತ ಪೊಲೀಸರು ನ್ಯಾಯಯುತವಾಗಿ ಕೆಲಸ ಮಾಡದ ಕಾರಣ ಜನ ಬೀದಿಗಿಳಿಯಬೇಕಾದ ಅನಿವಾರ್ಯತೆ ಬರುತ್ತಿದೆ. ಈ ಹೋರಾಟವನ್ನು ನ್ಯಾಯ ಸಿಗುವ ವರೆಗೆ ಮುಂದುವರಿಸುವುದಾಗಿ ಪ್ರಕಟಿಸಿದರು.
ಪ್ರತಿಭಟನೆಯಲ್ಲಿ ಸಿಪಿಐ ಎಂ ಮುಖಂಡ ಶಿವಕುಮಾರ್, ಕಾರ್ಮಿಕ ಮುಖಂಡ ಬಿ.ಎಂ.ಭಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೇಲೇಶ್ ಕುಮಾರ, ಛಲಿದ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಬಿ.ಕೆ.ವಸಂತ, ಮಲೆಕುಡಿಯ ಸಂಘದ ಮಾಜಿ ಅಧ್ಯಕ್ಷ ಜಯರಾಮ ಮೇರಿಯ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಘೋಷಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶೇಖರ್ ಕುಕ್ಕೇಡಿ, ಮರಾಠಿ ನಾಯ್ಕ ಯುವ ವೇದಿಕೆ ಸ್ಥಾಪಕ ನ್ಯಾ. ಸಂತೋಷ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜನ್ ಬಿ.ಗೌಡ, ಮುಖಂಡರಾದ ಮನೋಹರ ಕುಮಾರ್, ಅಭಿನಂದನ್ ಹರೀಶ್ ಕುಮಾರ್, ಅಬ್ದುಲ್ ರಹಿಮಾನ್ ಪಡ್ಪು, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಚಾಲಕರು ಹಾಜರಿದ್ದರು, ಶೇಖರ ಲಾಯಿಕ ಸ್ವಾಗತಿಸಿ ವಂದಿಸಿದರು. ಪ್ರತಿಭಟನಾಕಾರರು ಬೆಳ್ತಂಗಡಿ ಎಸ್.ಐ ಮೂಲಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Join Whatsapp
Exit mobile version