ನವದೆಹಲಿ: ಟೈಮ್ಸ್ ನೌ ಮತ್ತು ಝೀ ನ್ಯೂಸ್’ಗಳು ದೇಶದ ಜನಸಂಖ್ಯೆ ಹೆಚ್ಚಳ, ಪಿಎಫ್’ಐ ಪ್ರತಿಭಟನೆ ಬಗ್ಗೆ ಕೋಮು ಪ್ರಚೋದಿತ ರೀತಿಯಲ್ಲಿ ವರದಿ ಮಾಡಿದ್ದಕ್ಕೆ ಎನ್’ಬಿಡಿಎಸ್ಎ- ಭಾರತದ ಸುದ್ದಿ ಪ್ರಸಾರ ಮತ್ತು ವಿದ್ಯುನ್ಮಾನ ಪ್ರಾಮಾಣಿತ ಪ್ರಾಧಿಕಾರವು ಈ ಎರಡು ಮಾಧ್ಯಮ ಸಂಸ್ಥೆಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಮುಂದಿನ ದಿನಗಳಲ್ಲಿ ಇಂತಹ ವಿಷಯಗಳನ್ನು ಪ್ರಸಾರ ಮಾಡುವಾಗ ಎಚ್ಚರಿಕೆಯಿಂದ ಗಮನಿಸಬೇಕು ಎಂದು ಟೈಮ್ಸ್ ನೌ ಚಾನೆಲ್’ಗೆ ಸೂಚಿಸಲಾಗಿದೆ. ಅಲ್ಲದೆ ತತ್ಸಂಬಂಧಿ ವೀಡಿಯೋ ಮತ್ತು ವೀಡಿಯೋ ಹೈಪರ್ ಲಿಂಕ್’ಗಳನ್ನು ಕೂಡಲೆ ತೆಗೆದು ಹಾಕುವಂತೆ ಟೈಮ್ಸ್ ನೌಗೆ ಸೂಚಿಸಲಾಗಿದೆ.
ಸೆಪ್ಟೆಂಬರ್ 24ರಂದು ಪ್ರಸಾರವಾಗಿರುವ ಸುದ್ದಿಗೆ ಸಂಬಂಧಿಸಿ ಎನ್’ಬಿಡಿಎಸ್ಎ ಈ ಆದೇಶ ನೀಡಿದೆ. ಪೂನಾದಲ್ಲಿ ಪಿಎಫ್’ಐ ನಡೆಸಿದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಲಾಯಿತೆಂದೂ ಆರೋಪಿಸಲಾಗಿತ್ತು. ಆದರೆ ಅದು ಸುಳ್ಳು ಸುದ್ದಿ ಎಂಬುದು ಕೊನೆಗೆ ಸ್ಪಷ್ಟವಾಗಿತ್ತು.
ಈ ಸುದ್ದಿಯನ್ನು ಎಎನ್’ಐ, ಪಿಟಿಐ ಮತ್ತಿತರ ಸುದ್ದಿ ಸಂಸ್ಥೆಗಳ ಮೂಲಗಳಿಂದ ತೆಗೆದುಕೊಳ್ಳಲಾಗಿದೆ ಎಂದು ಟೈಮ್ಸ್ ನೌ ಅದಕ್ಕೆ ಪ್ರತಿಕ್ರಿಯಿಸಿತ್ತು. ನಮ್ಮ ಬಾತ್ಮೀದಾರರು ಆ ಸ್ಥಳದಲ್ಲಿ ಇರಲಿಲ್ಲ ಎಂದೂ ಚಾನೆಲ್ ಹೇಳಿತ್ತು.
ಆದರೆ ಸೆಪ್ಟೆಂಬರ್ 24ರ 10.06 ಗಂಟೆಗೆ ಸುದ್ದಿ ಪ್ರಸಾರ ಆಗುವಾಗ ಸದರಿ ಚಾನೆಲ್ ನಾವೇ ಈ ಸುದ್ದಿಯನ್ನು ಮೊದಲಿಗೆ ನೀಡುತ್ತಿರುವುದಾಗಿ ಹಾಕಿದ್ದಾಗಿ ಎನ್’ಬಿಡಿಎಸ್ಎ ಹೇಳಿದೆ.
‘ಹಲವಾರು ಜಾಲಜಾಣಗಳ ಮತ್ತಿತರ ಸುದ್ದಿ ಮೂಲಗಳನ್ನು ಸರಿದೂಗಿಸಿ ನೋಡಿದಾಗ ಪ್ರತಿಭಟನೆ ವೇಳೆ ಕೂಗಿದ ಆ ಘೋಷಣೆಯು ಪಾಕಿಸ್ತಾನ ಜಿಂದಾಬಾದ್ ಆಗಿರದೆ ಪಿಎಫ್’ಐ ಜಿಂದಾಬಾದ್ ಆಗಿದೆ ಎಂದೂ ತಿಳಿದು ಬಂದಿರುವುದಾಗಿ ಎನ್ ಬಿಡಿಎಸ್ಎ ಟಿಪ್ಪಣಿ ಬರೆದಿದೆ.
ಪಿಎಫ್’ಐ ಪ್ರತಿಭಟನೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ, ನಮ್ಮಲ್ಲೇ ಮೊದಲು ಅಲ್ಲದೆ ಪಿಎಫ್’ಐ ಧರಣಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗು, ಪಿಎಫ್’ಐ ಕಾರ್ಯಕರ್ತರಿಂದ ಪಾಕ್ ಜಿಂದಾಬಾದ್ ಸ್ವರ, ಪಾಕ್ ಜಿಂದಾಬಾದ್ ಘೋಷಣೆ ಕೂಗಿದರು ಎಂದಿತ್ಯಾದಿ ಸುದ್ದಿಯ ಆಂಕರ್ ಹೇಳುವುದು, ತೋರಿಸುವುದು ಇತ್ಯಾದಿ ಕೂಡ ಟೈಮ್ಸ್ ನೌ ಸುದ್ದಿ ಪ್ರಸಾರದಲ್ಲಿ ಸರಣಿಯಲ್ಲಿ ಬಂತು ಎಂದು ಹೇಳಲಾಗಿದೆ.
ಯಾವುದೇ ಒಂದು ಘೋಷಣೆಯ ಬಗ್ಗೆ ಖಚಿತತೆ ಇಲ್ಲದಿರುವಾಗ ಬಹಳ ಎಚ್ಚರಿಕೆಯನ್ನು ಸುದ್ದಿ, ವೀಡಿಯೋ ಬಗ್ಗೆ ತೆಗೆದುಕೊಳ್ಳಬೇಕು ಎಂದು ಸುದ್ದಿ ನಿಯಂತ್ರಣ ಅಂಗ ಸಂಸ್ಥೆಯು ಟೈಮ್ಸ್ ನೌಗೆ ಸ್ಪಷ್ಟಪಡಿಸಿದೆ.
ದೇಶದ ಜನಸಂಖ್ಯೆ ಏರಿಕೆ ಸಂಬಂಧ ವರದಿ ಮಾಡುವಾಗ ಮುಸ್ಲಿಂ ಸಮುದಾಯವನ್ನು ‘ಝೀ ನ್ಯೂಸ್’ ಟಾರ್ಗೆಟ್ ಮಾಡಿದೆ ಮತ್ತು ಈ ವಿಷಯಕ್ಕೆ ಕೋಮು ಬಣ್ಣವನ್ನು ನೀಡಲು ಅಂಕಿಅಂಶಗಳನ್ನು ಆಯ್ದು ಪ್ರಸಾರ ಮಾಡಿದೆ ಎಂದು ಎನ್ಬಿಡಿಎಸ್ಎ ತಿಳಿಸಿದೆ.
ಈ ಸುದ್ದಿಯು ವಸ್ತುನಿಷ್ಠತೆ ಮತ್ತು ತಟಸ್ಥತೆಯನ್ನು ಹೊಂದಿಲ್ಲ. ಏಕೆಂದರೆ ಜನಸಂಖ್ಯೆಯ ಬೆಳವಣಿಗೆಗೆ ಕೇವಲ ಒಂದು ಧರ್ಮವನ್ನು ಆರೋಪಿಸಲಾಗಿದೆ. “ಮುಸ್ಲಿಮರು ಒಂದೆಡೆ ಸೇರಿದ, ವಿಷಯಕ್ಕೆ ಸಂಬಂಧವಿಲ್ಲದ ದೃಶ್ಯಗಳನ್ನು ಪ್ರಸಾರ ಮಾಡುವ ಮೂಲಕ ಮತ್ತು ಹಿಂದೂ-ಮುಸ್ಲಿಂ ಜನಸಂಖ್ಯೆಯ ಅಂಕಿಅಂಶಗಳನ್ನು ಆಯ್ದು ಹಂಚಿಕೊಳ್ಳುವ ಮೂಲಕ, ಜನಸಂಖ್ಯಾ ಸ್ಫೋಟದ ವಿಷಯಕ್ಕೆ ಕೋಮು ಬಣ್ಣ ನೀಡಲಾಗಿದೆ” ಎಂದು ತನ್ನ ಆದೇಶದಲ್ಲಿ ಎನ್ಬಿಡಿಎಸ್ಎ ಬೇಸರ ವ್ಯಕ್ತಪಡಿಸಿದೆ.
ಸುದ್ದಿ ನಿರೂಪಕ ಅಮನ್ ಚೋಪ್ರಾ ಅವರು ನಡೆಸಿಕೊಟ್ಟ ನಾಲ್ಕು ಕಾರ್ಯಕ್ರಮಗಳಲ್ಲಿ ಮುಸ್ಲಿಮರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ‘ನ್ಯೂಸ್ 18 ಇಂಡಿಯಾ’ ಹಿಂದಿ ಸುದ್ದಿ ವಾಹಿನಿಗೆ ಸುದ್ದಿ ನಿಯಂತ್ರಣ ಸಂಸ್ಥೆ ಸೋಮವಾರ ದಂಡ ವಿಧಿಸಿದೆ.