Home ಟಾಪ್ ಸುದ್ದಿಗಳು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿಯವರದ್ದು ಏಕಪಕ್ಷೀಯ ನಿರ್ಧಾರ: ಸಚಿವಾಲಯ ನೌಕರ ಸಂಘ

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿಯವರದ್ದು ಏಕಪಕ್ಷೀಯ ನಿರ್ಧಾರ: ಸಚಿವಾಲಯ ನೌಕರ ಸಂಘ

ಬೆಂಗಳೂರು: ನೌಕರರ ಮುಷ್ಕರ ವಿಷಯದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಸಚಿವಾಲಯ ನೌಕರ ಸಂಘ ಆರೋಪಿಸಿದೆ.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ವಿರುದ್ಧ ಕಿಡಿಕಾರಿರುವ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ, ಷಡಕ್ಷರಿಯವರ ಏಕಪಕ್ಷೀಯ ನಿರ್ಣಯದ ವಿರುದ್ಧ ಹರಿಹಾಯ್ದಿದ್ದು, ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿದ್ದ 40%ರಷ್ಟು ವೇತನ ಹೆಚ್ಚಳವನ್ನು ಸರ್ಕಾರ ಪೂರೈಸದೇ ಕೇವಲ 17% ರಷ್ಟು ಅದು ಕೂಡ ಬರುವ ಏಪ್ರಿಲ್ ನಿಂದ ಜಾರಿಗೊಳಿಸಿದೆ. ಆದರೆ ಈ ಮಧ್ಯಂತರ ಆದೇಶ ತೃಪ್ತಿ‌ತಂದಿಲ್ಲ ಎಂದು ಹೇಳಿದ್ದಾರೆ.


ಸರ್ಕಾರ ಮಧ್ಯಂತರ ಆದೇಶ 25% ರಷ್ಟನ್ನಾದರೂ ಜಾರಿಗೊಳಿಸಬೇಕಿತ್ತು. ಅಲ್ಲದೇ ,2022 ಜುಲೈ 1ರಿಂದಲೇ 7 ನೇ‌ವೇತನ ಆಯೋಗ ಸೌಲಭ್ಯ ಜಾರಿಗೊಳ್ಳಬೇಕಿತ್ತು. ಆದರೆ ಸರ್ಕಾರ ಈಗ ಮುಷ್ಕರವನ್ನು ಹತ್ತಿಕ್ಕಲು ಈ ಮಧ್ಯಂತರ ಪರಿಹಾರ ಆದೇಶ ಮಾಡಿರುವುದು ಕಣ್ಣೊರೆಸುವ ತಂತ್ರವಷ್ಟೇ. ಮತ್ತೊಂದು ಪ್ರಮುಖ ಬೇಡಿಕೆಯಾದ ಎನ್’ಪಿ‌ಎಸ್ ರದ್ದುಪಡಿಸಿ ಒಪಿಎಸ್ ಅನ್ನು ಜಾರಿ ಮಾಡುವ ಪ್ರಮುಖ ಬೇಡಿಕೆಯ ಪರಿಶೀಲನೆಗೆ ಸಮಿತಿ ರಚನೆ ಮಾಡುವುದಾಗಿ ಹೇಳಿದ್ದಾರಾದರೂ ಈ ಹಿಂದೆ ಮಾಡಿರುವ ಸಮಿತಿ ಏನಾಯಿತು? ಎಂದು ಪ್ರಶ್ನಿಸಿರುವ ಗುರುಸ್ವಾಮಿ, ಇದೊಂದು ಸರ್ಕಾರದ ಕಣ್ಣೊರೆಸುವ ತಂತ್ರವಷ್ಟೇ ಎಂದು ಗುಡುಗಿದ್ದಾರೆ.


ಪ್ರಮುಖವಾಗಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಸಂಘದ ಬೇಡಿಕೆಗಳ ಈಡೇರಿಕೆಗೆ ಮುಷ್ಕರ ಆರಂಭಿಸುವ ಮುನ್ನ ಸಚಿವಾಲಯದ ನೌಕರರ ಸಂಘ ಸೇರಿದಂತೆ ಎಲ್ಲಾ ವೃಂದ ಸಂಘಗಳ ಜೊತೆ ಚರ್ಚಿಸಿದ್ದರು. ಆದರೆ ಈಗ ಸರ್ಕಾರದ ಕಣ್ಣೊರೆಸುವ ತಂತ್ರಕ್ಕೆ ಮಣಿದು ಮುಷ್ಕರವನ್ನು ಏಕಾಏಕಿಯಾಗಿ ಹಿಂಪಡೆಯಲು ಹೇಳಿದ್ದು ಸರಿಯಲ್ಲ. ಷಡಕ್ಷರಿಯವರ ಈ ರೀತಿಯ ಏಕಪಕ್ಷೀಯ ನಿರ್ಣಯ ಸರಿಯಲ್ಲ. ಮುಷ್ಕರ ಕರೆಯುವ ಮೊದಲು ನಮ್ಮೊಂದಿಗೆ ಚರ್ಚಿಸಿದ್ದು ಈಗ ಮುಷ್ಕರ ಹಿಂಪಡೆಯುವಾಗ ವೃಂದ ಸಂಘಗಳ ಜೊತೆ ಚರ್ಚಿಸಿಲ್ಲ ಏಕೆ? ಷಡಕ್ಷರಿಯವರ ಏಕ ಪಕ್ಷೀಯ ನಿರ್ಣಯವನ್ನು ಖಂಡಿಸುವುದಾಗಿ ಸಚಿವಾಲಯದ ನೌಕರರ ಸಂಘ ಎಚ್ಚರಿಸಿದೆ.


ಷಡಾಕ್ಷರಿಯವರ ಏಕಪಕ್ಷೀಯ ನಿರ್ಣಯವನ್ನು ಸಚಿವಾಲಯದ ವೃಂದ ಸಂಘಗಳು ಸಹ ಖಂಡಿಸಿವೆ. ಸಚಿವಾಲಯದ ಆಪ್ತ ಸಹಾಯಕ/ಆಪ್ತ ಕಾರ್ಯದರ್ಶಿಗಳ ಸಂಘದ ಅಧ್ಯಕ್ಷ ಶ್ರೀಧರ್‌ಮೂರ್ತಿ ಎಸ್ ಪಂಡಿತ್ ಸಹ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷರ ಹೇಳಿಕೆಗೆ ಬೆಂಬಲ ವ್ಯಕ್ತಪಡಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Join Whatsapp
Exit mobile version