ಬೆಂಗಳೂರು: 2015 ರಲ್ಲಿ ನಡೆದ ಜಾತಿ ಜನಗಣತಿ “ಹಳೆಯದು” ಮತ್ತು “ಅವೈಜ್ಞಾನಿಕ”ವಾಗಿದ್ದು, ಈ ಜಾತಿಗಣತಿ ವರದಿಯನ್ನು ಕಸದ ಬುಟ್ಟಿಗೆ ಹಾಕಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಿಂದುಳಿದ ವರ್ಗಗಳ ಜನರ ಕಲ್ಯಾಣದ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ವೈಜ್ಞಾನಿಕ ರೀತಿಯಲ್ಲಿ ಹೊಸ ಸಮೀಕ್ಷೆಯನ್ನು ನಡೆಸಿ. ಸರ್ವಪಕ್ಷ ಸಭೆ ಕರೆದ ನಂತರ ಅದನ್ನು ಕಾರ್ಯಗತಗೊಳಿಸಲಿ ಎಂದು ಹೇಳಿದರು.
ಜಾತಿಗಣತಿ ವರದಿ ಕುರಿತು ಸ್ವತಃ ಮುಖ್ಯಮಂತ್ರಿ, ಡಿಸಿಎಂ ಮತ್ತು ಸಚಿವರು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸರ್ಕಾರದೊಳಗೇ ವರದಿ ಕುರಿತು ಸ್ಪಷ್ಟತೆ ಇಲ್ಲ ಎಂದು ತಿಳಿಸಿದರು.
ಬಿಜೆಪಿಯ ಜನಕ್ರೋಶ ಯಾತ್ರೆಯ ನಂತರ ರಾಜ್ಯದ ಕಾಂಗ್ರೆಸ್ ಸರ್ಕಾರವು ಭಯಭೀತವಾಗಿದೆ. ತನ್ನ ವೈಫಲ್ಯಗಳಿಂದ, ವಿಶೇಷವಾಗಿ ಬೆಲೆ ಏರಿಕೆ ಕುರಿತಜನರ ಗಮನವನ್ನು ಬೇರೆಡೆ ಸೆಳೆಯಲು ಕೇಂದ್ರ ಸರ್ಕಾರದ ವಿರುದ್ಧ (ಏಪ್ರಿಲ್ 17 ರಂದು ಬೆಂಗಳೂರಿನಲ್ಲಿ) ಪ್ರತಿಭಟನೆ ನಡೆಸುತ್ತಿದೆ. ಬೆಲೆ ಏರಿಕೆಯ ಕುರಿತು ಕೇಂದ್ರ ಸರ್ಕಾರದ ಬಗ್ಗೆ ಕಾಂಗ್ರೆಸ್ ನಾಯಕರು ತಪ್ಪು ಮಾಹಿತಿಯನ್ನು ಹರಡಲು ಪ್ರಯತ್ನಿಸುತ್ತಿದ್ದಾರೆಂದು ಆರೋಪಿಸಿದರು.
2004 ರಿಂದ 2014 ರವರೆಗಿನ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆಗಳು ಶೇ.90ರಷ್ಟು ಮತ್ತು ಡೀಸೆಲ್ ಬೆಲೆಗಳು ಶೇ.96ರಷ್ಟು ಏರಿಕೆಯಾಗಿತ್ತು. ಆದಾಗ್ಯೂ, 2014 ರಿಂದ 2024 ರವರೆಗೆ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಅಡಿಯಲ್ಲಿ, ಪೆಟ್ರೋಲ್ ಬೆಲೆಗಳು 72 ರಿಂದ 100 ರೂ.ಗಳಿಗೆ ಏರಿಕೆಯಾಗಿವೆ ಅಂದರೆ ಶೇ.38ರಷ್ಟು ಹೆಚ್ಚಳವಾಗಿದೆ. ಡೀಸೆಲ್ ಬೆಲೆಗಳು 55 ರಿಂದ 90 ರೂ.ಗಳಿಗೆ ಏರಿಕೆಯಾಗಿವೆ (ಶೇ.63) ಎಂದು ಹೇಳಿದರು.
