Home ಟಾಪ್ ಸುದ್ದಿಗಳು ಸಚಿವ ಸಂಪುಟ ಪುನರ್ ರಚನೆ ಇಲ್ಲ, ದೆಹಲಿಗೆ ಬಂದಿರುವುದು ಅಭಿವೃದ್ಧಿ ಕುರಿತು ಚರ್ಚಿಸಲು: ಡಿ.ಕೆ ಶಿವಕುಮಾರ್

ಸಚಿವ ಸಂಪುಟ ಪುನರ್ ರಚನೆ ಇಲ್ಲ, ದೆಹಲಿಗೆ ಬಂದಿರುವುದು ಅಭಿವೃದ್ಧಿ ಕುರಿತು ಚರ್ಚಿಸಲು: ಡಿ.ಕೆ ಶಿವಕುಮಾರ್

0

ನವದೆಹಲಿ: ಕೇಂದ್ರದ ವಿವಿಧ ಸಚಿವರ ಜತೆ ಕರ್ನಾಟಕದ ಅಭಿವೃದ್ಧಿ ಯೋಜನೆಗಳ ವಿಚಾರವಾಗಿ ಮಾತುಕತೆ ನಡೆಸಿದ್ದೇನೆ. ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾದ ನಂತರ ಮತ್ತೊಮ್ಮೆ ದೆಹಲಿಗೆ ಬಂದು ವಿವಿಧ ಇಲಾಖೆಗಳ ಸಚಿವರ ಜೊತೆ ಚರ್ಚೆ ನಡೆಸುತ್ತೇನೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ನಿನ್ನೆ ಕೇಂದ್ರದ ವಿವಿಧ ಇಲಾಖೆಗಳ ಸಚಿವರನ್ನು ಭೇಟಿ ಮಾಡಿದ ನಂತರ ದೆಹಲಿಯ ಕರ್ನಾಟಕ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಪುಟ ವಿಸ್ತರಣೆ ವಿಚಾರವಾಗಿ ಚರ್ಚಿಸಲು ನಾನು ಹಾಗೂ ಸಿಎಂ ಸಿದ್ದರಾಮಯ್ಯ ದೆಹಲಿಗೆ ಬಂದಿಲ್ಲ. ಅಭಿವೃದ್ಧಿ ಯೋಜನೆಗಳ ಸಲುವಾಗಿ ಚರ್ಚಿಸಲು ನಾವು ಬಂದಿದ್ದೇವೆ. ರಾಹುಲ್ ಗಾಂಧಿ ಅವರ ಭೇಟಿಗೂ ಸಮಯ ಕೋರಿದ್ದೇನೆ. ಇಂದು ಅವರು ಪಟ್ನಾಗೆ ಹೋಗಿದ್ದಾರೆ. ನಾಳೆ ಭೇಟಿ ಮಾಡುವ ಸಾಧ್ಯತೆ ಇದೆ‌ ಎಂದರು.

ಸಂಪುಟ ಪುನರ್ ರಚನೆ ಸದ್ಯಕ್ಕೆ ಇಲ್ಲ, ಆ ಬಗ್ಗೆ ಚರ್ಚಿಸಲು ನಾವು ದೆಹಲಿಗೆ ಬಂದಿಲ್ಲ. ನಾವು ಇಲ್ಲಿ ಬಂದಿರುವುದು ಕರ್ನಾಟಕಕ್ಕೆ ಸಂಬಂಧಿಸಿದ ಅಭಿವೃದ್ಧಿಗಳ ಬಗ್ಗೆ ಚರ್ಚಿಸಲು. ಮೈಸೂರು ದಸರಾದಲ್ಲಿ ಸಣ್ಣ ಏರ್ ಶೋ ಆಯೋಜನೆ ಬಗ್ಗೆ ಮನವಿ ಮಾಡಲು ಇಂದು ನಾನು ಮತ್ತು ಸಿಎಂ ಸಿದ್ದರಾಮಯ್ಯನವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡುತ್ತೇವೆ ಎಂದರು.

ಕೇಂದ್ರ ಸಚಿವರ ಜತೆ ನೀರಾವರಿ ಯೋಜನೆಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಕೇಂದ್ರ ಜಲಶಕ್ತಿ, ಪರಿಸರ ಹಾಗೂ ಅರಣ್ಯ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಅರಣ್ಯ ಪ್ರದೇಶದ ಜಾಗ ಸ್ವಾಧೀನಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆದಿದೆ. ಮಹದಾಯಿ ಯೋಜನೆ ವಿಚಾರವಾಗಿ ಗೋವಾ ಸರ್ಕಾರ ತಕರಾರು ಹಾಕಿದೆ. ಗೋವಾ ತಕರಾರಿನ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಮೇಕೆದಾಟು ಯೋಜನೆ, ಕೃಷ್ಣ ನದಿ ನೀರು ವಿಚಾರವಾಗಿಯೂ ಚರ್ಚೆ ನಡೆದಿದೆ. ರಾಜ್ಯದ ಎಲ್ಲ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಸಚಿವರಿಗೆ ಮಾಹಿತಿ ನೀಡಲಾಗಿದೆ. ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಭರವಸೆಯನ್ನು ಕೇಂದ್ರ ಸಚಿವರು ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

NO COMMENTS

LEAVE A REPLY

Please enter your comment!
Please enter your name here

Exit mobile version