Home ಕರಾವಳಿ ಕೊಡಗಿನ ಮಹಿಳೆಯ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು: ಆತ್ಮಹತ್ಯೆಗೆ ಯತ್ನಿಸಿದ ತಾಯಿ, ಮಗುವನ್ನು ರಕ್ಷಿಸಿದ ಧರ್ಮಸ್ಥಳ...

ಕೊಡಗಿನ ಮಹಿಳೆಯ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು: ಆತ್ಮಹತ್ಯೆಗೆ ಯತ್ನಿಸಿದ ತಾಯಿ, ಮಗುವನ್ನು ರಕ್ಷಿಸಿದ ಧರ್ಮಸ್ಥಳ ಪೊಲೀಸರು

ಬೆಳ್ತಂಗಡಿ: ಕೊಡಗಿನಿಂದ ಮಗುವಿನೊಂದಿಗೆ ಮಹಿಳೆ ನಾಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದಿದ್ದು, ಅತ್ತೆಯ ಕಿರುಕುಳದಿಂದ ಬೇಸತ್ತು ಎರಡು ವರ್ಷದ ಮಗುವಿನೊಂದಿಗೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ಧರ್ಮಸ್ಥಳ ಪೊಲೀಸರ ಸಮಯಪ್ರಜ್ಞೆಯಿಂದ ತಾಯಿ ಮತ್ತು ಮಗು ಪಾರಾಗಿದ್ದಾರೆ.

ಮೂಲತಃ ಮಡಿಕೇರಿಯ ಶುಂಠಿಕೊಪ್ಪದ ಗ್ರಾಮದ ಮಲ್ಲಿಕಾರ್ಜುನ ಕಾಲೋನಿಯ ದಿನೇಶ್ ಎಂಬವರ ಪತ್ನಿ ಸೌಮ್ಯ ಎಂಬವರು ಗಂಡನ ಮನೆಯಲ್ಲಿ ಅತ್ತೆಯ ಕಿರುಕುಳದಿಂದ ಬೇಸತ್ತಿದ್ದರು. ಈ ಮಧ್ಯೆ ಆಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಿದ ಹೊರಬಂದ ಆಕೆ ಮನೆಗೆ ವಾಪಸ್ ಬಾರದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದರಿಂದ ಕಂಗಲಾದ ಮನೆಮಂದಿ ಸ್ಥಳೀಯ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದರು.

ಧರ್ಮಸ್ಥಳದ ನೇತ್ರಾವತಿ ನದಿಗೆ ಆತ್ಮಹತ್ಯೆ ಮಾಡಲು ತೆರಳಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು ಸ್ನೇಹಿತನ ನೆರವಿನೊಂದಿಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಬ್ ಇನ್ಸ್’ಪೆಕ್ಟರ್ ಕೃಷ್ಣಕಾಂತ್ ಪಾಟೀಲ್ ಮತ್ತು ಹೆಡ್ ಕಾನ್ಸ್’ಟೇಬಲ್ ಶೇಷಣ್ಣ ಅವರನ್ನೊಳಗೊಂಡ ತಂಡ ಬಸ್ ನಿಲ್ದಾಣದಲ್ಲಿ ಹುಡುಕಾಡಿದ್ದಾರೆ. ಈ ಸಂದರ್ಭದಲ್ಲಿ ಮಡಿಕೇರಿಯಿಂದ ಧರ್ಮಸ್ಥಳಕ್ಕೆ ಬರುವ ಬಸ್ಸಿನಲ್ಲಿ ಮಗುವಿನೊಂದಿಗೆ ಸೌಮ್ಯ ಪತ್ತೆಯಾಗಿದ್ದಾರೆ.

ಅತ್ತೆಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ನಡೆಸಲು ಧರ್ಮಸ್ಥಳಕ್ಕೆ ಬಂದಿರುವುದಾಗಿ ವಿಚಾರಣೆಯ ವೇಳೆ ಮಹಿಳೆ ಬಾಯ್ಬಿಟ್ಟುರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ತಾಯಿ ಮತ್ತು ಮಗುವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದು, ಪ್ರಕರಣ ಸುಖಾಂತ್ಯಗೊಂಡಿದೆ.

Join Whatsapp
Exit mobile version