ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿಗೆ ತಂದ ಜನವಿರೋಧಿ ನೀತಿ ಹಾಗೂ ಅರಾಜಕತೆಯ ಬಗ್ಗೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಹೊರತಂದಿರುವ “ ಬಿಜೆಪಿ ಸರಕಾರದ ಅರಾಜಕತೆಯ ದಿನಗಳು” ಪುಸ್ತಕವನ್ನು ಪಕ್ಷದ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಬಿಡುಗಡೆಗೊಳಿಸಿದರು.
ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ‘ವಿಕೃತ ಮನಸ್ಥಿತಿಯ ರೋಹಿತ್ ಚಕ್ರತೀರ್ಥಗೆ ಪಠ್ಯ ಪುಸ್ತಕ ಪರಿಷ್ಕರಣೆ ಜವಾಬ್ದಾರಿ ನೀಡಿ, ರಾಜ್ಯ ಸರಕಾರ ಮಕ್ಕಳ ಭವಿಷ್ಯವನ್ನು ಹಾಳುಗೆಯ್ಯುವ ಪ್ರಯತ್ನ ನಡೆಸುತ್ತಿದೆ. ಸಾಹಿತಿಗಳು, ಪ್ರಜಾಪ್ರಭುತ್ವವಾದಿಗಳು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಆದರೆ ವಿರೋಧಪಕ್ಷಗಳು ಪರಿಣಾಮಕಾರಿ ಹೋರಾಟ ನಡೆಸಿಲ್ಲ’ ಎಂದು ಟೀಕಿಸಿದರು.
ಪಠ್ಯ ಪರಿಷ್ಕರಣೆ ವಿವಾದ ಸೇರಿದಂತೆ ಇನ್ನಿತರೆ ಜನವಿರೋಧಿ ಕ್ರಮಗಳ ಜಾರಿಗೊಳಿಸುತ್ತಿರುವ ರಾಜ್ಯ ಸರಕಾರದ ವಿರುದ್ಧ ಜಾತ್ಯತೀತ ಪಕ್ಷಗಳು ಒಟ್ಟಾಗಿ ಹೋರಾಟ ನಡೆಸಬೇಕು ಎಂದು ಮನವಿ ಮಾಡಿದ ಅವರು, ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಮ್ ಮತ್ತು ಕ್ರೈಸ್ತರ ಮೇಲಿನ ನಿರಂತರ ದಾಳಿಗಳನ್ನು ಹಾಗೂ ಸಾಂಸ್ಕೃತಿಕ ಅಕ್ರಮಣಗಳನ್ನು ನಡೆಸುವ ಫ್ಯಾಶಿಸ್ಟ್ ಶಕ್ತಿಗಳಿಗೆ ರಾಜ್ಯದ ಬಿಜೆಪಿ ಸರಕಾರವು ಬೆಂಗಾವಲಾಗಿ ನಿಲ್ಲುತ್ತಿದೆ. ದಲಿತ ಸಮುದಾಯದ ಮೇಲಿನ ದಾಳಿಗಳನ್ನು ನಡೆಸುವ ಮನುವಾದಿ ಗುಂಪುಗಳ ಮೇಲೆ ಕಠಿಣಕ್ರಮ ಕೈಗೊಳ್ಳುವಲ್ಲಿ ಅದು ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಪ್ರಸಾದ್ ಮಾತನಾಡಿ, ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಬಳಿಕ ರಾಜ್ಯ ಸರಕಾರವು ಕಾನೂನು ಬಾಹಿರವಾಗಿ ಕೋವಿಡ್ ಸಂಬಂಧ ಮೀಸಲಾಗಿರುವ ಹಣವನ್ನು ಆತನ ಕುಟುಂಬಕ್ಕೆ ನೀಡಿದೆ. ಹರ್ಷ ಕೊಲೆ ಬಳಿಕ ಆತನಕುಟುಂಬಕ್ಕೆಬರೋಬ್ಬರಿ 25 ಲಕ್ಷರೂ. ಪರಿಹಾರ ನೀಡಲಾಗಿದೆ. ಇದು ಮುಖ್ಯಮಂತ್ರಿ ನಿಧಿಯಿಂದ ನೀಡಿಲ್ಲ. ಬದಲಾಗಿ, ಕೋವಿಡ್ ತುರ್ತು ಪರಿಸ್ಥಿತಿಯನ್ನು ನಿರ್ವಹಿಸಲು ಮೀಸಲಿಟ್ಟಿದ್ದ ಹಣವನ್ನುಒದಗಿಸಿದ್ದಾರೆ. ಇದರ ವಿರುದ್ಧ ಪ್ರತಿಯೊಬ್ಬರು ಧ್ವನಿಗೂಡಸಬೇಕಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫಾನ್ಸ್ ಫ್ರಾಂಕೋ, ರಾಜ್ಯ ಉಪಾಧ್ಯಕ್ಷ ದೇವನೂರ ಪುಟ್ಟನಂಜಯ್ಯ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ್ ಪ್ರಸಾದ್, ಅಫ್ಸರ್ ಕೊಡ್ಲಿಪೇಟೆ, ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.