ಪೊಲೀಸ್ ಅಧಿಕಾರಿಯ ಕಾಲರ್ ಪಟ್ಟಿ ಹಿಡಿದು ಎಳೆದಾಡಿದ ಕಾಂಗ್ರೆಸ್ ನಾಯಕಿಯ ವೀಡಿಯೋ ವೈರಲ್
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಇ.ಡಿ. ಪ್ರಶ್ನಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಎಐಸಿಸಿ ಕೇಂದ್ರ ಕಚೇರಿಗೆ ದೆಹಲಿ ಪೊಲೀಸರು ಬಲವಂತವಾಗಿ ನುಗ್ಗಿ ಪಕ್ಷದ ಕಾರ್ಯಕರ್ತರಿಗೆ ಹಲ್ಲೆ ನಡೆಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದ ಬೆನ್ನಲ್ಲೇ ಪೊಲೀಸರು, ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.
ಈ ಮಧ್ಯೆ ಕಾಂಗ್ರೆಸ್ ಮುಖಂಡೆ ಮತ್ತು ಕೇಂದ್ರ ಮಾಜಿ ಸಚಿವೆ ರೇಣುಕಾ ಚೌಧರಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಕಾಲರ್ ಪಟ್ಟಿ ಹಿಡಿದು ಎಳೆದಾಡುವ ವೀಡಿಯೋ ವೈರಲ್ ಆಗಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಹಲ್ಲೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾಳು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ಸಾಗರ್ ಪ್ರೀತ್ ಹೂಡಾ ತಿಳಿಸಿದ್ದಾರೆ.
ಪ್ರತಿಭಟನಕಾರರು ಬ್ಯಾರಿಕೇಡ್’ಗಳನ್ನು ಮುರಿದು, ಟೈರ್’ಗೆ ಬೆಂಕಿ ಹಚ್ಚಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ನಾವು ಅವರ ಮೇಲೆ ಪ್ರಕರಣ ದಾಖಲಿಸಬೇಕಾಯಿತು ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ದೆಹಲಿ ಪೊಲೀಸರು ನವದೆಹಲಿಯ ಹಲವು ಕಡೆ ಸೆಕ್ಷನ್ 144 ಸೆಕ್ಷನ್ ನಡಿ ನಿಷೇಧಾಜ್ಞೆಗಳನ್ನು ವಿಧಿಸಿದ್ದಾರೆ. ಈ ಪ್ರದೇಶದಲ್ಲಿ ಯಾವುದೇ ಪ್ರತಿಭಟನೆಗಳು ಅಥವಾ ಸಭೆಗಳನ್ನು ಅನುಮತಿಸಲಾಗುವುದಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.