ನವದೆಹಲಿ: ಪೌರತ್ವ ತ್ಯಜಿಸುತ್ತಿರುವ ಭಾರತೀಯರ ಸಂಖ್ಯೆ ಕಳೆದ ಕೆಲವು ವರ್ಷಗಳಿಂದ ಗಣನೀಯವಾಗಿ ಏರುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ಬಹಿರಂಗಪಡಿಸಿದೆ.
2017ರಲ್ಲಿ 1,33,049 ಭಾರತೀಯರು ಪೌರತ್ವ ತ್ಯಜಿಸಿದ್ದರು. ಈ ವರ್ಷ(2022 ಅಕ್ಟೋಬರ್ 31ರವರೆಗೆ) ಒಟ್ಟು 1,83,741 ಜನರು ಪೌರತ್ವ ತೊರೆದಿದ್ದಾರೆ.
ಶುಕ್ರವಾರ ಲೋಕಸಭೆಯಲ್ಲಿ ಈ ಬಗ್ಗೆ ಲಿಖಿತ ಉತ್ತರ ನೀಡಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್, ‘2015 ರಲ್ಲಿ ಭಾರತೀಯ ಪೌರತ್ವವನ್ನು ತ್ಯಜಿಸಿದ ಭಾರತೀಯರ ಸಂಖ್ಯೆ 1,31,489 ಆಗಿತ್ತು. ಆ ಸಂಖ್ಯೆ 2016ರಲ್ಲಿ 1,41,603, 2017ರಲ್ಲಿ 1,33,049, 2018ರಲ್ಲಿ 1,34,561, 2019ರಲ್ಲಿ 1,44,017, 2020ರಲ್ಲಿ 85,256 ಮತ್ತು 2021ರಲ್ಲಿ 1,63,370 ಆಗಿದೆ ಎಂದು ತಿಳಿಸಿದರು.
ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದವರನ್ನು ಹೊರತುಪಡಿಸಿ ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಪೌರತ್ವ ಪಡೆದಿರುವ ವಿದೇಶಿ ಪ್ರಜೆಗಳ ಸಂಖ್ಯೆಯ ಬಗ್ಗೆಯೂ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಲಾಗಿದೆ.
‘ಪಾಕ್, ಬಾಂಗ್ಲಾ, ಅಫ್ಗಾನಿಸ್ತಾನ ಹೊರತುಪಡಿಸಿದಂತೆ 93 (2015), 153 (2016), 175 (2017), 129 (2018). ) 13 (2019), 27 (2020), 42 (2021) ಮತ್ತು 60 (2022) ಮಂದಿ ಪೌರತ್ವ ಪಡೆದಿರುವುದಾಗಿ ಮಾಹಿತಿ ನೀಡಲಾಗಿದೆ.