ಬೆಂಗಳೂರು: ಅತ್ಯಂತ ಚಾಣಾಕ್ಷ ಮತ್ತು ಅಷ್ಟೇ ಅಪಾಯಕಾರಿ ನಡೆ. ತಮಗೆ ಬೇಕಾದುದೆಲ್ಲವನ್ನು ವ್ಯವಸ್ಥಿತವಾಗಿ ಮಾಡಿ, ಅದನ್ನು ಹಾಗೆಯೆ ಉಳಿಸಿಕೊಂಡು ಸಮಿತಿಯನ್ನು ವಿಸರ್ಜಿಸಿರುವುದು, ಕೇವಲ ಕಣ್ಣೊರೆಸುವ ತಂತ್ರ. ಟಿಪ್ಪಣಿಯಲ್ಲಿ ಎಲ್ಲಿಯೂ ಆಗಿರುವ ತಪ್ಪನ್ನು ಒಪ್ಪಿಕೊಳ್ಳುವುದಾಗಲಿ ಅಥವಾ ಸಂವಿಧಾನಕ್ಕೆ ವಿರುದ್ಧವಾಗಿ ವೈದೀಕರಣ ನೆಲೆಯಲ್ಲಿ ಸೇರಿಸಿರುವ ತಿರುಚಿರುವ ಪಾಠಗಳನ್ನು ಕೈಬಿಡುವ ಬಗ್ಗೆಯಾಗಲಿ ಪ್ರಸ್ತಾಪವಾಗಿಲ್ಲ ಎಂದು ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ. ಹೇಳಿದ್ದಾರೆ.
ಈ ಬಗ್ಗೆ ಫೇಸ್ ಬುಕ್ ಪೇಜ್ ನಲ್ಲಿ ಬರೆದಿರುವ ಅವರು, ಯಾವುದೇ ಪ್ರಜಾಸತ್ತಾತ್ಮಕ ವಿಧಾನವಾಗಲಿ ಅಥವಾ ಪಠ್ಯ ಪುಸ್ತಕ ರಚನೆಗೆ/ ಪರಿಷ್ಕರಣೆಗೆ ಅಗತ್ಯವಾದ ಒಂದು ಶಿಕ್ಷಣ ಶಾಸ್ತ್ರೀಯ ಕ್ರಮವನ್ನಾಗಲಿ ಅನುಸರಿಸಿದ ಪ್ರಕ್ರಿಯೆ ಮೂಲಕ ಪರಿಷ್ಕರಿಸಿದ ಪುಸ್ತಕಗಳನ್ನು ಆಧರಿಸಿ ಮಕ್ಕಳಿಗೆ ಕಲಿಸುವುದು ಪ್ರಜಾಪ್ರಭುತ್ವಕ್ಕೆ ಹಾಗು ಸಂವಿಧಾನಕ್ಕೆ ಅಪಚಾರ. ಈ ಕಾರಣದಿಂದ ಸಂವಿಧಾನ ಪರವಾದ ಈ ಹೋರಾಟ ಮುಂದುವರಿಯಬೇಕು ಎಂದು ಅವರು ತಿಳಿಸಿದ್ದಾರೆ.
ಪರಿಷ್ಕರಣೆ ನಿಯಮ ಬಾಹಿರ ಹಾಗು ಸಂವಿಧಾನ ವಿರೋಧಿಯಾದ ಕಾರಣ, ಪರಿಷ್ಕರಣೆಯ ಹೆಸರಲ್ಲಿ ಸೇರಿಸಿರುವ ಎಲ್ಲ ಕೋಮುವಾದಿ ಪಾಠಗಳು ಹಾಗು ದುರುದ್ದೇಶದಿಂದ ಬದಲಿಸಿರುವ ಶೀರ್ಷಿಕೆ, ಪದಪುಂಜ, ವಾಕ್ಯ, ಪ್ಯಾರಾ, ಇತ್ಯಾದಿಗಳು, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಿರುವುದರಿಂದ, ಸಂಪೂರ್ಣ ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು. ಪರಿಷ್ಕೃತ ಪುಸ್ತಕಗಳ ವಿತರಣೆ ಸ್ಥಗಿತಗೊಳಿಸಿ ಎಲ್ಲವನ್ನು ಹಿಂಪಡೆಯಬೇಕು. ಈ ಹಿಂದೆ ಇದ್ದ ಪುಸ್ತಕಗಳನ್ನು ಯಥಾವತ್ತಾಗಿ ಮುಂದುವರಿಸಬೇಕು. ಪಠ್ಯಪುಸ್ತಕ ಪರಿಷ್ಕರಣೆ ಹೆಸರಿನ ಈ ಪ್ರಹಸನದಲ್ಲಿ ಆಗಿರುವ ಲೋಪಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಒಂದು ಸ್ವತಂತ್ರ ಶಿಕ್ಷಣ ಹಾಗು ವಿಷಯ ತಜ್ಞರ ಸಮಿತಿ ರಚಿಸಬೇಕು ಎಂದು ಡಾ.ನಿರಂಜನಾರಾಧ್ಯ ಆಗ್ರಹಿಸಿದ್ದಾರೆ.