ಹೈದರಾಬಾದ್: ಮುಂದಿನ ತಿಂಗಳು ಹೈದರಾಬಾದ್ ಸ್ಥಳೀಯ ಚುನಾವಣೆಗಾಗಿ ಪ್ರಚಾರ ನಡೆಸುತ್ತಿರುವ ಬಿಜೆಪಿಯ ತೇಜಸ್ವಿ ಸೂರ್ಯ, ಎ.ಐ.ಎಂ.ಎಂ ನಾಯಕ ಮತ್ತು ಹೈದರಾಬಾದ್ ಸಂಸದ ಅಸದುದ್ದೀನ್ ಓವೈಸಿಗೆ ಹಾಕುವ ಪ್ರತಿಯೊಂದು ಮತಗಳು ಭಾರತದ ವಿರುದ್ಧ ಚಲಾಯಿಸುವ ಮತಗಳಾಗಿವೆ ಎನ್ನುವ ಮೂಲಕ ಆಕ್ರಮಣಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಅಸಾದುದ್ದೀನ್ ಓವೈಸಿ ಮತ್ತು ಅವರ ಸಹೋದರರು “ವಿಭಜನಕಾರಿ ಮತ್ತು ಕೋಮುವಾದಿ” ರಾಜಕೀಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಬೆಂಗಳೂರಿನ ಸಂಸದ ತೇಜಸ್ವಿ ಸೂರ್ಯ, ಎಐಎಂಎಂ ನಾಯಕರು ಹೈದರಾಬಾದ್ ನಲ್ಲಿ ರೊಹಿಂಗ್ಯಾ ಮುಸ್ಲಿಮರನ್ನು ಅನುಮತಿಸುತ್ತಾರೆಯೇ ಹೊರತು ಅಭಿವೃದ್ಧಿಯನ್ನಲ್ಲ ಎಂದರು.
“ಓವೈಸಿಗೆ ಹಾಕುವ ಪ್ರತಿಯೊಂದು ಮತವೂ ಭಾರತದ ಮತ್ತು ಭಾರತವು ಪ್ರತಿಪಾದಿಸುವ ಎಲ್ಲದರ ವಿರುದ್ಧವಾಗಿದೆ” ಎಂದು ಇತ್ತೀಚೆಗೆ ಬಿಜೆಪಿಯ ಯುವ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ತೇಜಸ್ವಿ ಸೂರ್ಯ ಹೇಳಿದರು.
“ಅವರು ಯಾವಾಗಲೂ ಮುಹಮ್ಮದ್ ಅಲಿ ಜಿನ್ನಾ ಮಾತನಾಡುತ್ತಿದ್ದಂತಹ ಕ್ರೋಧೋನ್ಮತ್ತ ಇಸ್ಲಾಮಿಕ್ ವಾದ, ಪ್ರತ್ಯೇಕತಾವಾದ ಮತ್ತು ತೀವ್ರವಾದದ ಮಾತುಗಳನ್ನು ಆಡುತ್ತಾರೆ. ಪ್ರತಿಯೋರ್ವ ಭಾರತೀಯನೂ ಓವೈಸಿಯ ವಿಭಜನಕಾರಿ ಕೋಮುವಾದಿ ರಾಜಕೀಯದ ವಿರುದ್ಧ ನಿಲ್ಲಬೇಕು” ಎಂದು ಅವರು ಹೇಳಿದರು.
ಡಿಸೆಂಬರ್ 1ರಂದು ನಡೆಯಲಿರುವ ಹೈದರಬಾದ್ ಮಹಾನಗರ ಪಾಲಿಕೆ ಚುನಾವಣೆಯು ದಕ್ಷಿಣಕ್ಕೆ ಬಿಜೆಪಿಯ ಹೆಬ್ಬಾಗಿಲು ಎಂದು ತೇಜಸ್ವಿ ಸೂರ್ಯ ಕರೆದಿದ್ದಾರೆ.