Home ಟಾಪ್ ಸುದ್ದಿಗಳು ಬಗ್ಗುಂಡಿ ಕೆರೆ ಪುನಶ್ಚೇತನಕ್ಕೆ ತಾಂತ್ರಿಕ ಉಪಸಮಿತಿ: ಜಿಲ್ಲಾಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನ

ಬಗ್ಗುಂಡಿ ಕೆರೆ ಪುನಶ್ಚೇತನಕ್ಕೆ ತಾಂತ್ರಿಕ ಉಪಸಮಿತಿ: ಜಿಲ್ಲಾಮಟ್ಟದ ಸಭೆಯಲ್ಲಿ ಜಿಲ್ಲಾಧಿಕಾರಿ ನಿರ್ದೇಶನ

ಮಂಗಳೂರು: ನಗರದ ಬಗ್ಗುಂಡಿ ಕೆರೆಯ ಪುನರುಜ್ಜೀವನಕ್ಕೆ ತಾಂತ್ರಿಕ ಉಪಸಮಿತಿಯೊಂದನ್ನು ರಚಿಸಿ ಆ ಮೂಲಕ ಹಂತಹಂತವಾಗಿ ಕೆರೆಯ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ನ ಮಿನಿ ಸಭಾಂಗಣದಲ್ಲಿ ಬಗ್ಗುಂಡಿ ಕೆರೆ ಅಭಿವೃದ್ಧಿ, ಕಾಂಡ್ಲಾ ವನದ ಪುನರುಜ್ಜೀವನ ಹಾಗೂ ಕುಡುಂಬೂರು ಹೊಳೆ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬಗ್ಗುಂಡಿ ಕೆರೆಯ ಪುನರುಜ್ಜೀವನಕ್ಕೆ ತಾಂತ್ರಿಕ ಉಪ ಸಮಿತಿ ರಚಿಸಿ ಯೋಜನಾಬದ್ಧವಾಗಿ ಕೆಲಸ ಮಾಡುವ ಬಗ್ಗೆ ಸಮಗ್ರವಾಗಿ ತಿಳಿಸಿದ ಜಿಲ್ಲಾಧಿಕಾರಿಯವರು, ಎಂಆರ್‌ಪಿಎಲ್‌ನವರು ಕೆರೆ ಅಭಿವೃದ್ಧಿಗೆ 16 ಕೋಟಿ ರೂ. ನೆರವು ನೀಡಲಿದ್ದಾರೆ, ಈ ಹಣವನ್ನು ಯೋಜನಾಬದ್ದವಾಗಿ ವಿನಿಯೋಗಿಸಿ ಕೆರೆಯನ್ನು ಅಭಿವೃದ್ಧಿ ಪಡಿಸಬೇಕು, ಮೊದಲ ಹಂತದಲ್ಲಿ ಕೆರೆಯ ಒಟ್ಟಾರೆ ಅಭಿವೃದ್ಧಿಗೆ ಯಾವ ಯಾವ ಕೆಲಸಗಳನ್ನು ಮಾಡಬೇಕು ಎಂಬುದರ ಬಗ್ಗೆ ಯೋಜನೆ ರೂಪಿಸಬೇಕು, ಇದಕ್ಕೆ ತಜ್ಞರಿಂದ ಮಾಹಿತಿ ಪಡೆಯುವಂತೆ ಸಲಹೆ ನೀಡಿದರು.

ಎನ್‌ಐಟಿಕೆ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ ಈ ಬಗ್ಗೆ ನೆರವು ಪಡೆದು ಕೆಲಸ ನಿರ್ವಹಿಸುವಂತೆ ತಿಳಿಸಿದ ಜಿಲ್ಲಾಧಿಕಾರಿಯವರು, ಕೆರೆಗೆ ಕೊಳಚೆ ನೀರು ಬಿಡುವ ಕಾರ್ಖಾನೆಗಳನ್ನು ಪತ್ತೆ ಮಾಡಿ ವರದಿ ಸಲ್ಲಿಸಬೇಕು, ಜೆಸ್ಕೋ ವಶಪಡಿಸಿಕೊಂಡ ಕೆರೆಯ ಜಾಗವನ್ನು ಮರಳಿ ವಾಪಸ್ ಪಡೆಯುವ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಬಗ್ಗುಂಡಿ ಕೆರೆಯ ಸಮಗ್ರ ಅಭಿವೃದ್ಧಿ, ಕಾಂಡ್ಲಾ ವನದ ಬಗ್ಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಕೆ. ದಿನೇಶ್ ಕುಮಾರ್ ಮಾತನಾಡಿದರು.

ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್,
ಮಂಗಳೂರು ಉಪವಿಭಾಗ ಸಹಾಯಕ ಆಯುಕ್ತ ಮದನ್‌ಮೋಹನ್, ಮುಡಾ ಆಯುಕ್ತ ಭಾಸ್ಕರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್, ಎಂಆರ್‌ಪಿಎಲ್ ಡಿಜಿಎಂ ಸುದರ್ಶನ್, ಮಾಲಿನ್ಯ ನಿಯಂತ್ರಣ ಮಂಡಳಿಯ ರಮೇಶ್, ಕೆಎಐಡಿಬಿ ಅಧಿಕಾರಿ ದತ್ತಾತ್ರೇಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪಿ ಮಹಾದೇವಪ್ಪ, ಸಿಆರ್‌ಜೆಡ್ ಉಪನಿರ್ದೇಶಕ ಮಹೇಶ್ ಕುಮಾರ್ ಸಭೆಯಲ್ಲಿ ಹಾಜರಿದ್ದರು.

Join Whatsapp
Exit mobile version