ಡಬ್ಲಿನ್: ಕೊನೆಯ ಎಸೆತದವರೆಗೂ ಕುತೂಹಲ ಉಳಿಸಿಕೊಂಡಿದ್ದ ಟಿ20 ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ರೋಚಕ ಗೆಲುವು ದಾಖಲಿಸಿದೆ. ಆ ಮೂಲಕ 2 ಟಿ20 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಗೆದ್ದು ಸಂಭ್ರಮಿಸಿದೆ.
ಡಬ್ಲಿನ್ ನಲ್ಲಿ ನಡೆದ ಪಂದ್ಯದಲ್ಲಿ ದೀಪಕ್ ಹೂಡಾ – ಸಂಜು ಸ್ಯಾಮ್ಸನ್ ದಾಖಲೆಯ 176 ರನ್ ಗಳ ಜೊತೆಯಾಟದ ನೆರವಿನಿಂದ ಭಾರತ, 7 ವಿಕೆಟ್ ನಷ್ಟದಲ್ಲಿ 225 ರನ್ ಗಳಿಸಿತ್ತು. ಕಠಿಣ ಗುರಿಯನ್ನು ಬೆಂಬತ್ತಲು ಅಂತಿಮ ಎಸೆತದವರೆಗೂ ಹೋರಾಟ ಚಾಲ್ತಿಯಲ್ಲಿರಿಸಿದ್ದ ಅತಿಥೇಯ ಐರ್ಲೆಂಡ್, ಅಂತಿಮವಾಗಿ 221 ರನ್ ಗಳಿಸಿ, ನಾಲ್ಕು ರನ್ ಗಳ ಅಂತರದಲ್ಲಿ ಶರಣಾಯಿತು.
20ನೇ ಓವರ್ನಲ್ಲಿ ಐರ್ಲೆಂಡ್ ಗೆಲುವಿಗೆ 17 ರನ್ ಅಗತ್ಯವಿತ್ತು. ನಿರ್ಣಾಯಕ ಓವರ್ ಎಸೆದ ಯುವ ವೇಗಿ ಉಮ್ರಾನ್ ಮಲಿಕ್, ಎದುರಾಳಿ ಬ್ಯಾಟರ ಗಳ 12 ರನ್ ಗಳಿಗೆ ನಿಯಂತ್ರಿಸಿದ ಪರಿಣಾಮ ಭಾರತ ಗೆಲುವಿನ ನಿಟ್ಟುಸಿರು ಬಿಡುವಂತಾಯಿತು.
ಐರ್ಲೆಂಡ್ ಗೆ ಉತ್ತಮ ಆರಂಭ ಒದಗಿಸಿದ್ದ ಪೌಲ್ ಸ್ಟರ್ಲಿಂಗ್ – ನಾಯಕ ಆಂಡಿ ಬಾಲ್ಬಿರ್ನಿ, ಮೊದಲ ವಿಕೆಟ್ಗೆ 72 ರನ್ ಒಟ್ಟುಗೂಡಿಸಿದ್ದರು. ಹ್ಯಾರಿ ಟೆಕ್ಟರ್ 39 ರನ್ ಗಳಿಸಿದರೆ, ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದ ಜಾರ್ಜ್ ಡೊಕ್ರೆಲ್ (34 ರನ್, 16 ಎಸೆತ 4X3 6X3) ಮತ್ತು ಮಾರ್ಕ್ ಅದೈರ್ (23 ರನ್, 12 ಎಸೆತ 4X3 6X1) ತಂಡದ ಗೆಲುವಿಗೆ ಶತಾಯ ಗತಾಯ ಪ್ರಯತ್ನ ನಡೆಸಿದರು.
ಭಾರತದ ಪರ 4 ಓವರ್ಗಳ ಬೌಲಿಂಗ್ ದಾಳಿಯಲ್ಲಿ ಹರ್ಷಲ್ ಪಟೇಲ್ 1 ವಿಕೆಟ್ ಪಡೆದರಾದರೂ, 54 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಉಳಿದಂತೆ ಭುವನೇಶ್ವರ್ ಕುಮಾರ್, ರವಿ ಬಿಷ್ಣೋಯ್ ಹಾಗೂ ಉಮ್ರಾನ್ ಮಲಿಕ್ ತಲಾ ಒಂದು ವಿಕೆಟ್ ಪಡೆದರು.
ದೀಪಕ್ ಹೂಡ – ಸಂಜು ಸ್ಯಾಮ್ಸನ್ ದಾಖಲೆಯ ಜತೆಯಾಟ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಟೀಮ್ ಇಂಡಿಯಾ ಪರ ಆರಂಭಿಕನಾಗಿ ಕಣಕ್ಕಿಳಿದಿದ್ದ ಇಶಾನ್ ಕಿಶಾನ್ ಕೇವಲ ಮೂರು ರನ್ ಗಳಿಸುವಷ್ಟರಲ್ಲಿಯೇ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ದೀಪಕ್ ಹೂಡ, ಆರಂಭಿಕ ಸಂಜು ಸ್ಯಾಮ್ಸನ್ ಜತೆ ದಾಖಲೆಯ 176 ರನ್ ಗಳ ಜೊತೆಯಾಟದಲ್ಲಿ ಭಾಗಿಯಾದರು. ಸ್ಯಾಮ್ಸನ್ 77 ರಗ್ ಗಳಿಸಿದ್ದ ವೇಳೆ ಮಾರ್ಕ್ ಅದೈರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಮತ್ತೊಂದೆಡೆ ಬಿರುಸಿನ ಬ್ಯಾಟಿಂಗ್ ಮುಂದುವರಿಸಿದ ಹೂಡಾ, ಆಕರ್ಷಕ ಶತಕ ಗಳಿಸಿದರು. 57 ಎಸೆತಗಳನ್ನು ಎದುರಿಸಿದ ಹೂಡಾ, ಆರು ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 104 ರನ್ ಗಳಿಸಿ ಲಿಟ್ಲ್ಗೆ ವಿಕೆಟ್ ಒಪ್ಪಿಸಿದರು. ಆ ಮೂಲಕ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಭಾರತ ಪರ ಶತಕ ದಾಖಲಿಸಿದ ನಾಲ್ಕನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿಕೊಂಡರೆ, ನಾಯಕ ಹಾರ್ದಿಕ್ ಪಾಂಡ್ಯ 13 ರಗ್ ಗಳಿಸಿ ಅಜೇಯರಾಗುಳಿದರು.