Home ಟಾಪ್ ಸುದ್ದಿಗಳು ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮಕೈಗೊಳ್ಳಿ: ಕೇಂದ್ರಕ್ಕೆ ನಿಜಶರಣ ಅಂಬಿಗರ ಚೌಡಯ್ಯ ಸಂಘ ಒತ್ತಾಯ

ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮಕೈಗೊಳ್ಳಿ: ಕೇಂದ್ರಕ್ಕೆ ನಿಜಶರಣ ಅಂಬಿಗರ ಚೌಡಯ್ಯ ಸಂಘ ಒತ್ತಾಯ

ಬೆಂಗಳೂರು: ಗಂಗಾಮತಸ್ಥರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಸ್ತಾವನೆ ಕೇಂದ್ರದ ಪರಿಶೀಲನೆಯಲ್ಲಿದ್ದು, ಕೂಡಲೇ ಬೇಡಿಕೆ ಈಡೇರಿಸುವಂತೆ ಸಮುದಾಯದ ಮುಖಂಡರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿಜಶರಣ ಅಂಬಿಗರ ಚೌಡಯ್ಯ ಪೀಠಾಧ್ಯಕ್ಷ ಶಾಂತಭೀಷ್ಮ ಚೌಡಯ್ಯ ಹಾಗೂ ಅಂಬಿಗರ ಚೌಡಯ್ಯ ಸಂಘದ ರಾಜ್ಯಾಧ್ಯಕ್ಷ ಬಿ.ಮೌಲಾಲಿ, ನಮ್ಮ ಸಮುದಾಯಕ್ಕೆ ಕೇಂದ್ರ ಸರ್ಕಾರ ಕೂಡಲೇ ನ್ಯಾಯ ಒದಗಿಸಬೇಕು. ರಾಜ್ಯದಿಂದ ಶಿಫಾರಸ್ಸು ಮಾಡಿದ ಪ್ರಸ್ತಾವನೆಯು ಕೇಂದ್ರ ಸರ್ಕಾರದ ಆರ್.ಜೆ.ಐ ಇಲಾಖೆಯಲ್ಲಿ ಬಹುದಿನಗಳಿಂದ ನೆನೆಗುದಿಗೆ ಬಿದ್ದಿದೆ. ನಮ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಚುನಾವಣೆಯಲ್ಲಿ ಬಹಿರಂಗ ಘೋಷಣೆ ಮಾಡಿದ್ದು, ಈ ಆಶ್ವಾಸನೆಯನ್ನು ಈಡೇರಿಸಲು ಕೂಡಲೇ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ನಿಜಶರಣ ಅಂಬಿಗರ ಚೌಡಯ್ಯ ಪೀಠದ ಸ್ವಾಮೀಜಿ ಸಾರಥ್ಯದಲ್ಲಿ ವಿವಿಧ ತಾಲೂಕು, ಜಿಲ್ಲಾ ಅಧ್ಯಕ್ಷರು, ವಿವಿಧ ಪಕ್ಷದ ಮುಖಂಡರ ನೇತೃತ್ವದಲ್ಲಿ ಭಾನುವಾರ ಬೆಂಗಳೂರಿನಲ್ಲಿ ಬೃಹತ್ ಜನೋತ್ಸವದ ಸಭೆಯಲ್ಲಿ ಕೇಂದ್ರದ ಮೇಲೆ ಒತ್ತಡ ಹೇರಲು ನಿರ್ಣಯಿಸಲಾಗಿದೆ. 1931ರಲ್ಲಿ ಮೈಸೂರು ಸಂಸ್ಥಾನದ ನಾಲ್ವಡಿ ಕೃಷ್ಣ ದೇವರಾಯರ ಕಾಲದಿಂದಲೇ ಗಂಗಾಕುಲ, ಗಂಗಾಮಾತ ಎಂಬ ಪದಗಳ ಮೂಲಕ ಸಮುದಾಯವನ್ನು ಕರೆಯಲಾಗುತ್ತಿತ್ತು. ಸುಣಗಾರ, ಮೀನುಗಾರ, ಅಂಬಿಗ, ಕೋಲಿ, ಕಬ್ಬಲಿಗ, ಬಾರ್ಕಿರ, ಬೆಸ್ತರು, ಮೊಗವೀರ ಮುಂತಾದ ಹೆಸರುಗಳನ್ನು ಅನುಸರಿಸಿ ಶೈಕ್ಷಣಿಕ ಮೀಸಲಾತಿ ನೀಡಲಾಗಿತ್ತು. ಬ್ರಿಟಿಷರ ಕಾಲದಲ್ಲೂ ಪರಿಶಿಷ್ಟ ಪಂಗಡದ ಸ್ಥಾನಮಾನವನ್ನು ಸಮುದಾಯ ಹೊಂದಿತ್ತು ಎಂದರು.

ಹಂಪಿ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ಪೀಠ ಹಾಗೂ ಮೈಸೂರಿನ ಬಡಕಟ್ಟು ಜನಾಂಗದ ಸಂಶೋಧನಾ ಸಂಸ್ಥೆ ಸಮಗ್ರವಾಗಿ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಅದರಂತೆ ಗಂಗಾಮತಸ್ಥರ ಪರ್ಯಾಯ ಪದಗಳಾದ ಅಂಬಿಗ, ಬೆಸ್ತ, ಕೋಳಿ, ಕಬ್ಬಲಿಗ, ಬಾರ್ಕಿರ, ಸುಣಗಾರ, ನಾಟೀಕರ್ ಮೀನುಗಾರ ಮೊಗವೀರ ಮುಂತಾದವುಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಕೇಂದ್ರ ಸರ್ಕಾರಕ್ಕೆ ಎಲ್ಲಾ ಪುರಾವೆಗಳೊಂದಿಗೆ ದಾಖಲೆಗಳನ್ನು ಸಲ್ಲಿಸಿದೆ. ಆದರೆ ಈ ಕುರಿತಾದ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ ಎಂದು ಸಂಘದ ರಾಜ್ಯಾಧ್ಯಕ್ಷ ಬಿ.ಮೌಲಾಲಿ ಬೇಸರ ವ್ಯಕ್ತಪಡಿಸಿದರು.

ಬಡತನ, ಅಜ್ಞಾನ, ಮೂಡನಂಬಿಕೆ, ಗುಲಾಮಗಿರಿಯಲ್ಲಿದ್ದ ಈ ಜನಾಂಗಳು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ವಂಚಿತವಾಗಿ ಶೋಷಣೆಗೆ ಒಳಗಾಗಿವೆ. ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸದರಿ ಜನಾಂಗವನ್ನು ಪರಿಶಿಷ್ಟ ಜನಾಂಗದ ಪಟ್ಟಿಗೆ ಸೇರಿಸಲು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು, ಸಂಸದರು ಹಾಗೂ ರಾಜ್ಯ ಸರ್ಕಾರ ಪ್ರಯತ್ನ ತೀವ್ರಗೊಳಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷರಾದ ನಾಗರಾಜ ಮಣ್ಣೂರ, ಮಹದೇವ ಕರ್ಜಗಿ, ಪ್ರಧಾನ ಕಾರ್ಯದರ್ಶಿ ಸಿ.ಮುರಳಿಧರ, ಹಿರಿಯ ಮುಖಂಡ ಮಂಜುನಾಥ ಸುಣಗಾರ, ಗಂಗಾಧರ, ಅವಣ್ಣ ಮೇಕೇರಿ, ಅಶೋಕ ವಾಲೀಕರ್, ಹಾಗೂ ರಾಜ್ಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Join Whatsapp
Exit mobile version