Home ಟಾಪ್ ಸುದ್ದಿಗಳು ಕೇರಳ ರಾಜ್ಯಪಾಲರ ಹೇಳಿಕೆ ಸಂವಿಧಾನ ವಿರೋಧಿ: ಸಿಪಿಐ(ಎಂ) ಪಾಲಿಟ್ ಬ್ಯುರೊ

ಕೇರಳ ರಾಜ್ಯಪಾಲರ ಹೇಳಿಕೆ ಸಂವಿಧಾನ ವಿರೋಧಿ: ಸಿಪಿಐ(ಎಂ) ಪಾಲಿಟ್ ಬ್ಯುರೊ

ನವದೆಹಲಿ: ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ತಾವು ಹೊಂದಿರುವ ಸಾಂವಿಧಾನಿಕ ಹುದ್ದೆಗೆ ತಕ್ಕುದಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ) ಪಾಲಿಟ್ ಬ್ಯುರೊ ಆರೋಪಿಸಿದೆ.

ಇದರಲ್ಲಿ ಇತ್ತೀಚಿನದು, ಕೇರಳ ರಾಜ್ಯಪಾಲರ ಅಧಿಕೃತ ಹ್ಯಾಂಡಲ್ ನಿಂದ ಬಂದಿರುವ ಟ್ವೀಟ್. ಇದರಲ್ಲಿ ಕೇರಳ ರಾಜಭವನದ ಸಾರ್ವಜನಿಕ ಸಂಪರ್ಕ ಅಧಿಕಾರಿಯು ರಾಜ್ಯಪಾಲರನ್ನು ಉಲ್ಲೇಖಿಸಿ, ಮಂತ್ರಿಗಳ ಹೇಳಿಕೆಗಳು ರಾಜ್ಯಪಾಲರ ಹುದ್ದೆಯ ಘನತೆಯನ್ನು ಇಳಿಸಿದರೆ, ಕ್ರಮಗಳನ್ನು ಕೈಗೊಳ್ಳಲು ಕಾರಣವಾಗಬಹುದು ಎಂದಿದ್ದಾರೆ.

ಅಂದರೆ ರಾಜ್ಯಪಾಲರು ಸಚಿವರನ್ನು ವಜಾಗೊಳಿಸುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಇಂತಹ ನಿರಂಕುಶ ಅಧಿಕಾರಗಳನ್ನು ಸಂವಿಧಾನದಲ್ಲಿ ರಾಜ್ಯಪಾಲರಿಗೆ ನೀಡಲಾಗಿಲ್ಲ. ಇಂತಹ ಹೇಳಿಕೆ ನೀಡುವ ಮೂಲಕ ಖಾನ್ ತಮ್ಮ ರಾಜಕೀಯ ಪಕ್ಷಪಾತ ಮತ್ತು ಎಲ್ ಡಿಎಫ್ ಸರ್ಕಾರದ ಬಗ್ಗೆ ಹಗೆತನವನ್ನು ಬಹಿರಂಗಪಡಿಸಿದ್ದಾರಷ್ಟೇ ಎಂದಿರುವ ಸಿಪಿಐ(ಎಂ) ಪಾಲಿಟ್ ಬ್ಯುರೊ, ಕೇರಳ ರಾಜ್ಯಪಾಲರು ಇಂತಹ ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆಗಳನ್ನು ನೀಡುವುದನ್ನು ತಡೆಯಲು ಭಾರತದ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದೆ.

ತನ್ನನ್ನು ಟೀಕಿಸಿದರೆ ಸಚಿವ ಸ್ಥಾನದಿಂದ ವಜಾ ಮಾಡುವುದಾಗಿ ರಾಜ್ಯಪಾಲರು ಬೆದರಿಕೆ ಹಾಕಿರುವುದು ಭಾರತದ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಅಜ್ಞಾನವನ್ನು ತೋರಿಸುತ್ತದೆ ಎಂದು ಎಂ.ವಿ.ಗೋವಿಂದನ್ ಮಾಸ್ಟರ್, ಸಿಪಿಐ(ಎಂ)ನ ಕೇರಳ ರಾಜ್ಯ ಕಾರ್ಯದರ್ಶಿ ಟೀಕಿಸಿದ್ದಾರೆ.

‘ಇಷ್ಟವನ್ನು ಹಿಂಪಡೆಯುವ’ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಅವರು ಮುಖ್ಯಮಂತ್ರಿಗಳ ಸಲಹೆಯ ಮೇರೆಗೆ ಮಾತ್ರ ಸಚಿವರನ್ನು ನೇಮಿಸಬಹುದು ಮತ್ತು ತೆಗೆದುಹಾಕಬಹುದು ಎಂದು ನೆನಪಿಸಿರುವ ಅವರು ರಾಜ್ಯಪಾಲರ ಪಿಆರ್ ಒ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಟಿಪ್ಪಣಿ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸವಾಲು ಹಾಕುತ್ತಿದೆ ಎಂದು ಟೀಕಿಸಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಕೇರಳದ ರಾಜ್ಯಪಾಲರಿಗೆ ನೆನಪಿಲ್ಲದಿರುವುದು ಅಚ್ಚರಿ ಮೂಡಿಸಿದೆ. ಅವರ ಇತ್ತೀಚಿನ ಹಸ್ತಕ್ಷೇಪವನ್ನು ಜನರು, ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಭಾರತೀಯ ಸಂವಿಧಾನದ ಮೂಲಭೂತ ತತ್ವಗಳ ಮೇಲಿನ ಆಕ್ರಮಣವಾಗಿ ಮಾತ್ರ ನೋಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.

“ರಾಜ್ಯಪಾಲರು ಪ್ರಜಾಪ್ರಭುತ್ವಕ್ಕೆ ಕಳಂಕ ತರುವ ಇಂತಹ ಪ್ರಯತ್ನಗಳಿಂದ ಹಿಂದೆ ಸರಿಯಬೇಕು. ನೀವು ಸಂವಿಧಾನದ 163,164 ನೇ ವಿಧಿಗಳು ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಓದಬೇಕೆಂದು ವಿನಂತಿಸುತ್ತೇವೆ. ಸಹಿ ಹಾಕದೆ ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳನ್ನು ತಡೆಹಿಡಿಯುತ್ತಿರುವುದು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿರುವುದು ಘನತೆಯೇ ಎಂಬುದನ್ನು ರಾಜ್ಯಪಾಲರು ಸ್ಪಷ್ಟಪಡಿಸಬೇಕು. ಮಂತ್ರಿಗಳು ರಾಜ್ಯದ ಜನರಿಂದ ಚುನಾಯಿತರಾಗುತ್ತಾರೆ, ಅವರು ಜನರಿಗೆ ಜವಾಬ್ದಾರರು, ವಸಾಹತುಶಾಹಿ ಕಾಲದ ಪಳೆಯುಳಿಕೆಗಳಾದ ಹುದ್ದೆಗಳಿಗೆ ಅಲ್ಲ ಎಂದು ಅವರಿಗೆ ಮತ್ತೊಮ್ಮೆ ನೆನಪಿಸಬೇಕಾಗುತ್ತದೆ” ಎನ್ನುತ್ತ ಗೋವಿಂದನ್ ಮಾಸ್ಟರ್ ಟ್ವೀಟ್ ಹಿಂಪಡೆಯಲು ಕ್ರಮ ಕೈಗೊಳ್ಳಬೇಕು ಎಂದು ಅವರಿಗೆ ಮನವಿ ಮಾಡಿದ್ದಾರೆ.

Join Whatsapp
Exit mobile version