Home ಕರಾವಳಿ ಎಕ್ಕೂರಿನ ಮೀನುಗಾರಿಕಾ ಕಾಲೇಜಿನಲ್ಲಿ ಕಿಸಾನ್ ಸಮ್ಮೇಳನ

ಎಕ್ಕೂರಿನ ಮೀನುಗಾರಿಕಾ ಕಾಲೇಜಿನಲ್ಲಿ ಕಿಸಾನ್ ಸಮ್ಮೇಳನ

ಮಂಗಳೂರು: ದೇಶದಲ್ಲಿನ ಕೃಷಿ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದದ್ದು. ಆದ್ದರಿಂದಲೇ ಜೈ ಜವಾನ್-ಜೈ ಕಿಸಾನ್ ಎಂಬ ಘೋಷ ವಾಕ್ಯ ನಮ್ಮಲ್ಲಿ ಜನಜನಿತವಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

ಅವರು ಸೋಮವಾರ ಎಕ್ಕೂರಿನ ಮೀನುಗಾರಿಕಾ ಕಾಲೇಜಿನ ಆವರಣದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಅಗ್ರಿ ಸ್ಟಾರ್ಟ್ ಅಪ್ ಕಾನ್ ಕ್ಲೈವ್ ಹಾಗೂ ಕಿಸಾನ್ ಸಮ್ಮೆಳನದಲ್ಲಿ ಭಾಗವಹಿಸಿ ಮಾತನಾಡಿದರು. ನವದೆಹಲಿಯಲ್ಲಿ ಪ್ರಧಾನಮಂತ್ರಿಗಳು ವರ್ಚುವಲ್ ವೇದಿಕೆಯಲ್ಲಿ ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳು ಕಡಿಮೆಯಾಗುತ್ತಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿಗಳು ಕೃಷಿ ವಲಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡುತ್ತಿದ್ದಾರೆ.

ಮೀನುಗಾರಿಕೆಯನ್ನು ಕೃಷಿ ಇಲಾಖೆಯಿಂದ ಬೇರ್ಪಡಿಸಿ ಪ್ರತ್ಯೇಕ ಮಂತ್ರಾಲಯ ಸ್ಥಾಪಿಸಿದ್ದಾರೆ, ಎಲ್ಲೆಡೆ ಮಣ್ಣು ಪರೀಕ್ಷಾ ಕೇಂದ್ರಗಳನ್ನು ತೆರಯಲಾಗಿದೆ, ಜತೆಗೆ ದೇಶದಲ್ಲೇ ಮೊದಲ ಹೈನುಗಾರಿಕಾ ಬ್ಯಾಂಕ್ ತೆರೆದ ಶ್ರೇಯಸ್ಸು ನಮ್ಮ ರಾಜ್ಯಕ್ಕೆ ಸಲ್ಲುತ್ತದೆ ಎಂದರು.

ದೇಶದಲ್ಲಿ ಕಿಸಾನ್ ಸಮ್ಮಾನ್ ಯೋಜನೆಯಡಿ 600 ರೂ.ಗಳ ಪ್ರೋತ್ಸಾಹ ಧನ ನೀಡಲಾಗುತ್ತಿದ್ದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರಿಗೆ ಸುಮಾರು 277 ಕೋಟಿ ರೂ.ಗಳಷ್ಟು ಪ್ರೋತ್ಸಾಹ ಧನ ನೀಡಲಾಗಿದೆ ಎಂದು ತಿಳಿಸಿದರು.

ಭತ್ತ, ಅಡಿಕೆ, ತೆಂಗು, ರಬ್ಬರ್, ಕಾಳು ಮೆಣಸು, ಕೊಕ್ಕೊ, ವೆನಿಲಾ, ಮೀನುಗಾರಿಕೆ ಹೀಗೆ ದಕ್ಷಿಣ ಕನ್ನಡ ಜಿಲ್ಲೆಯ ರೈತ ಸದಾ ಪ್ರಯೋಗಶೀಲ, ಆದ್ದರಿಂದಲೇ ರೈತ ಆತ್ಮಹತ್ಯೆಗಳು ನಡೆಯದೇ ಇರುವ ಜಿಲ್ಲೆ ಎಂಬ ಖ್ಯಾತಿ ಹೊಂದಿದೆ. ಕೃಷಿ ಯಂತ್ರೋಪಕರಣಗಳ ಖರೀದಿಗಾಗಿ ಸರ್ಕಾರ ಜಿಲ್ಲೆಗೆ ಸುಮಾರು 6 ಕೋಟಿ ರೂ.ಗಳನ್ನು ನೀಡಿದೆ ಎಂದು ಹೇಳಿದರು.

ಇಲ್ಲಿಯವರೆಗೂ ಕೃಷಿಯಲ್ಲಿ ಶೇ.50 ಬೆಳೆ ನಾಶಕ್ಕೆ ಮಾತ್ರ ಪರಿಹಾರ ನೀಡಲಾಗುತ್ತಿತ್ತು ಆದರೆ ಈಗ ಶೇ. 30 ಬೆಳೆ ನಾಶವಾದರೂ ಫಸಲ್ ಭೀಮಾ ಯೋಜನೆಯಡಿ ಪರಿಹಾರ ಧನ ವಿತರಿಸಲಾಗುತ್ತಿದೆ. ಕಳೆದ 1 ವರ್ಷದಲ್ಲಿ 576 ಕ್ವಿಂಟಾಲ್ ಬಿತ್ತನೆ ಬೀಜವನ್ನು ರೈತರಿಗೆ ವಿತರಿಸಲಾಗಿದೆ. ವಾಣಿಜ್ಯ ಬೆಳೆ ಅಡಿಕೆಗೆ ಬಂದಿರುವ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗದ ಪರೀಕ್ಷೆಗಾಗಿ ಇನ್ನು ಮುಂದೆ ರೈತರು ದೂರ ಓಡುವ ಅವಶ್ಯಕತೆಯಿಲ್ಲ ಸಧ್ಯದಲ್ಲೇ ಜಿಲ್ಲೆಯಲ್ಲಿ ಪರೀಕ್ಷಾ ಲ್ಯಾಬ್ಗಳನ್ನು ತೆರೆಯಲಾಗುವುದು ಎಂದರು.

ಇದರೊಂದಿಗೆ ದೇಶದಲ್ಲೇ ಮೊದಲ ಬಾರಿಗೆ ರೈತ ವಿದ್ಯಾರ್ಥಿ ನಿಧಿ ಮೂಲಕ ರೈತರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಆ ಮೂಲಕ ರಾಜ್ಯ ಸರ್ಕಾರ ರೈತರ ಮಕ್ಕಳ ಶೈಕ್ಷಣಿಕ ಕನಸಿಗೆ ನೀರೆರೆಯುವ ಕೆಲಸ ಮಾಡುತ್ತಿದೆ, ಈ ಎಲ್ಲ ಕೆಲಸಗಳ ಮೂಲಕ ದೇಶದಲ್ಲಿ ಕೃಷಿ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ಕೆಲಸಗಳಾಗುತ್ತಿವೆ ಎಂದವರು ವಿವರಿಸಿದರು.

ಶಾಸಕರಾದ ವೇದವ್ಯಾಸ್ ಕಾಮತ್ ಮಾತನಾಡಿ, ದೇಶದ ರೈತರಿಗಾಗಿ ಪ್ರಧಾನ ಮಂತ್ರಿಗಳು ಪಿ.ಎಂ. ಕಿಸಾನ್ ಯೋಜನೆಯಡಿ 16 ಸಾವಿರ ಕೋಟಿ ರೂ ಗಳನ್ನು ಬಿಡುಗಡೆ ಮಾಡಿದ್ದಾರೆ, ಇದರೊಂದಿಗೆ ಒಂದು ದೇಶ ಒಂದು ರಸಗೊಬ್ಬರ ಎಂಬ ವಿನೂತನ ಯೋಜನೆಗೆ ಚಾಲನೆ ನೀಡುವ ಮೂಲಕ ರೈತರ ಮುಖದಲ್ಲಿ ಭರವಸೆಯ ನಗು ಮೂಡಿಸುವ ಕೆಲಸವಾಗುತ್ತಿದೆ ಎಂದರು. 
 ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪ ಮೇಯರ್ ಪೂರ್ಣಿಮಾ, ಕೃಷಿ ವಿಜ್ಞಾನಿಗಳಾದ ಡಾ.ಟಿ.ಜಿ. ರಮೇಶ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಸೀತಾ, ಮಹಾನಗರ ಪಾಲಿಕೆ ಸದಸ್ಯರಾದ ಭರತ್ ಕುಮಾರ್, ಪ್ರಗತಿಪರ ಕೃಷಿಕರಾದ ದಯಾನಂದ ಕುಲಾಲ್, ಜಾಸ್ಮಿನ್ ಅರಹ್ನ ಹಾಗೂ ಇತರೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
Join Whatsapp
Exit mobile version