ಚೆನ್ನೈ: ಬಿಜೆಪಿಯ ಕಾರ್ಯದರ್ಶಿ ಆಗಿರುವ ಹಾಗೂ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣದ ದಾಖಲೆಯ ವಕೀಲೆ ವಿಕ್ಟೋರಿಯಾ ಗೌರಿ ಅವರನ್ನು ಮದ್ರಾಸು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ನೇಮಿಸುವುದನ್ನು ಹೈಕೋರ್ಟ್ ವಕೀಲರ ಸಂಘವು ತೀವ್ರವಾಗಿ ವಿರೋಧಿಸಿದ್ದು, ರಾಷ್ಟ್ರಪತಿ ಮತ್ತು ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ಮನವಿ ಸಲ್ಲಿಸಿದೆ.
ಬಿಜೆಪಿಯಲ್ಲಿ ತನ್ನನ್ನು ಚೌಕಿದಾರ್ ವಿಕ್ಟೋರಿಯಾ ಗೌರಿ ಎಂದು ಕರೆದುಕೊಳ್ಳುವ ಈ ವಕೀಲೆ ಆರೆಸ್ಸೆಸ್‌ನ ಆರ್ಗನೈಸರ್‌ಗೆ ಬರೆದ ಲೇಖನದಲ್ಲಿ, ಆರೆಸ್ಸೆಸ್‌ನ ಯೂಟ್ಯೂಬ್ ಚಾನೆಲ್‌ಗಳಿಗೆ ನೀಡಿದ ಸಂದರ್ಶನಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ಮಾತನಾಡಿರುವುದನ್ನು ಮನವಿಯಲ್ಲಿ ವಿವರಿಸಲಾಗಿದೆ.
ಲವ್ ಜಿಹಾದ್, ಹಸಿರು ಉಗ್ರ ಮುಸ್ಲಿಮರು, ಮತಾಂತರದ ಅಂಡರ್ ವರ್ಲ್ಡ್ ಕ್ರಿಶ್ಚಿಯನ್ನರು ಇತ್ಯಾದಿ ಆಪಾದಿಸುವ ವಕೀಲೆ ನ್ಯಾಯಾಧೀಶೆಯಾಗಿ ಅಲ್ಪಸಂಖ್ಯಾತರಿಗೆ ನ್ಯಾಯ ನೀಡಲಾರರು. ಈ ನೇಮಕವು ಸಂವಿಧಾನ ವಿರೋಧಿ ಎಂದು ಮದ್ರಾಸು ಹೈಕೋರ್ಟ್ ವಕೀಲರು ನೇಮಕ ವಿರೋಧಿಸಿ ಮನವಿ ಸಲ್ಲಿಸಿದ್ದಾರೆ.
ಜನವರಿ 17ರಂದು ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಹೊಸದಾಗಿ ಮೂವರು ನ್ಯಾಯಾಧೀಶರ ಹೆಸರನ್ನು ಹೈಕೋರ್ಟುಗಳಿಗೆ ಶಿಫಾರಸು ಮಾಡಿದ್ದು, ಮದ್ರಾಸು ಹೈಕೋರ್ಟಿಗೆ ವಿಕ್ಟೋರಿಯಾ ಗೌರಿ ಹೆಸರು ಶಿಫಾರಸು ಮಾಡಲಾಗಿತ್ತು.