ಸಾಲಬಾಧೆ: ಒಂದೇ ಕುಟುಂಬದ 7 ಮಂದಿ ವಿಷ ಸೇವನೆ, ಮಹಿಳೆ ಸಾವು

Prasthutha|

ಬೆಂಗಳೂರು: ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 7 ಮಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಮಹಿಳೆಯೊಬ್ಬರು ಮೃತಪಟ್ಟು 6 ಮಂದಿಯ ಸ್ಥಿತಿ ಚಿಂತಾಜನಕವಾಗಿರುವ ಘಟನೆ ರಾಮನಗರ ತಾಲೂಕಿನ ದೊಡ್ಡ ಮಣ್ಣಗುಡ್ಡೆ ಗ್ರಾಮದಲ್ಲಿ ನಡೆದಿದೆ.
ದೊಡ್ಡ ಮಣ್ಣಗುಡ್ಡೆಯ ಮಂಗಳಮ್ಮ (28) ಮೃತಪಟ್ಟವರು. ಅವರ ಪತಿ ರಾಜು(31), ಅತ್ತೆ ಸೊಲ್ಲಾಪುರದಮ್ಮ (48), ಮಕ್ಕಳಾದ ಆಕಾಶ್ (9), ಕೃಷ್ಣ (13), ಹಾಗೂ ಮಂಗಳಮ್ಮ ತಂಗಿ ಸವಿತಾ (24), ಸವಿತಾ ಮಗಳು ದರ್ಶಿನಿ (4) ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

- Advertisement -


ಕುಂಬಳಗೂಡುವಿನ ಸುಬ್ಬರಾಯನಪಾಳ್ಯದ ರಾಜು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು 10 ಲಕ್ಕಕ್ಕೂ ಹೆಚ್ಚಿನ ಕೈ ಸಾಲ ಮಾಡಿಕೊಂಡು ಸಾಲಗಾರರ ಕಾಟಕ್ಕೆ ಹುಟ್ಟೂರು ತೊರೆದು ಅತ್ತೆ ಮನೆ ದೊಡ್ಡಮಣ್ಣುಗುಡ್ಡೆ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಿದ್ದರು ಎನ್ನಲಾಗಿದೆ.


ಹುಟ್ಟೂರು ತೊರೆದರೂ ರಾಜುಗೆ ಸಾಲಗಾರರ ಕಾಟ ಮಾತ್ರ ತಪ್ಪಿರಲಿಲ್ಲ. ಪಡೆದ ಹಣಕ್ಕೆ ಬಡ್ಡಿಯನ್ನು ಕಟ್ಟಲಾಗದ ಬಡ ಕುಟುಂಬ, ಸಾಲ ಪಡೆದವರಿಂದ ನಿರಂತರ ಕಿರುಕುಳಕ್ಕೆ ಒಳಗಾಗಿ ಬೇಸತ್ತಿತ್ತು. ಕೊನೆಗೆ ಸಾಲಕ್ಕೆ ಹೆದರಿ ನಿನ್ನೆ ಮಧ್ಯಾಹ್ನ ಇಡೀ ಕುಟುಂಬ ಆತ್ಮಹತ್ಯೆಯ ನಿರ್ಧಾರ ಮಾಡಿತ್ತು. ಊರ ಹೊರಗಿದ್ದ ರಾಜು ಮಾವನ ಸಮಾಧಿ ಬಳಿಗೆ ತೆರಳಿದ್ದ ಕುಟುಂಬ, ಊಟ ಹಾಗೂ ತಿಂಡಿಗಳ ಜೊತೆ ಇಲಿ ಪಾಷಾಣ ಸೇವಿಸಿದೆ. ಬಳಿಕ ಸಕ್ಕರೆ ಅಚ್ಚು, ಬಾಳೆ ಹಣ್ಣು ತಿಂದಿದ್ದರು. ತಲಾ 2 ಪ್ಯಾಕೆಟ್ ಇಲಿ ಪಾಷಾಣ ಸೇವಿಸಿದ್ದ 7 ಮಂದಿ ಸಾವಿಗಾಗಿ ಕಾದು ಸಮಾಧಿ ಬಳಿಯೇ ಕೆಲಕಾಲ ಕುಳಿತಿದ್ದರು.

- Advertisement -


ಕೆಲ ಹೊತ್ತಿನ ಬಳಿಕ ರಾಜು ಪತ್ನಿ ಮಂಗಳಮ್ಮ ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ. ಉಳಿದವರು ಸಂಕಟ ತಾಳಲಾರದೆ ಅಲ್ಲಿಂದ ಹೊರಟು ಊರ ಕಡೆಗೆ ಬಂದು ಗ್ರಾಮದ ಜನರಿಗೆ ವಿಷಯ ತಿಳಿಸಿದ್ದಾರೆ. ಗ್ರಾಮಸ್ಥರು ತಕ್ಷಣವೇ ಅಸ್ವಸ್ಥರನ್ನು ಸ್ಥಳೀಯ ಜಿಲ್ಲಾಸ್ಪತ್ರೆ ದಾಖಲಿಸಿದ್ದು ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಡ್ಯ ಮೀಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಕುರಿತು ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version