ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಇರುವ ಕೈದಿಗಳ ವೇತಳ ಹೆಚ್ಚಳ ಮಾಡಲಾಗಿದೆ. ವಿವಿಧ ಪ್ರಕರಣಗಳಲ್ಲಿ ಜೈಲು ಸೇರಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಸಂಬಳ ಜಾಸ್ತಿ ಮಾಡಿದೆ.
ಕೈದಿಗಳ ಸಂಬಳವನ್ನು ಮೂರುಪಟ್ಟು ಜಾಸ್ತಿ ಮಾಡಲು ರಾಜ್ಯ ಗೃಹ ಇಲಾಖೆ ಮಾಡಿ ಆದೇಶ ಮಾಡಿದ್ದು, ಇನ್ನುಮುಂದೆ ದೇಶದಲ್ಲೇ ಅತಿ ಹೆಚ್ಚು ಸಂಬಳವನ್ನು ರಾಜ್ಯದ ಜೈಲಿನಲ್ಲಿರುವ ಕೈದಿಗಳು ಪಡೆಯಲಿದ್ದಾರೆ.
ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಒಟ್ಟು 54 ಕಾರಾಗೃಹಗಳಿವೆ. ಈ ಕಾರಾಗೃಹಗಳಲ್ಲಿ ಒಟ್ಟು 3,565 ಕೈದಿಗಳು ಶಿಕ್ಷೆ ಅನುಭವಿಸುತ್ತಿದ್ದು, ಇವರಿಗೆ ನೀಡುವ ಸಂಬಳದ ವೆಚ್ಚ ಒಂದು ವರ್ಷಕ್ಕೆ 58 ಕೋಟಿ 28 ಲಕ್ಷದ 34,720 ರೂಪಾಯಿ ಆಗಿದೆ.
ಕೈದಿಗಳ ಸಂಬಳದ ವಿವರ
ಒಂದು ವರ್ಷದವರೆಗೆ ಕೈದಿಗಳಿಗೆ ನಿತ್ಯ 524 ರೂ. ಸಂಬಳ ನಿಗದಿ ಪಡಿಸಲಾಗುತ್ತದೆ. ವರ್ಷದ ಬಳಿಕ ಅವರನ್ನು ಕುಶಲ ಬಂಧಿ ಎಂದು ಪರಿಗಣಿಸಲಾಗುತ್ತದೆ. ಆಗ ಅವರಿಗೆ ದಿನಕ್ಕೆ 548 ರೂಪಾಯಿ ಸಂಬಳ ನೀಡಲಾಗುತ್ತದೆ. ವಾರದ ರಜೆ ಪಡೆದು ಕೆಲಸ ಮಾಡಿದರೆ, ಆ ಕೈದಿಗೆ ತಿಂಗಳಿಗೆ 14,248 ರೂಪಾಯಿ ವೇತನ ಸಿಗುತ್ತದೆ. ಎರಡು ವರ್ಷಗಳಾದ ಮೇಲೆ ಆ ಕೈದಿಗೆ ದಿನಕ್ಕೆ 615 ರೂಪಾಯಿ ಸಂಬಳ ನೀಡಲಾಗುತ್ತದೆ. ವಾರದ ರಜೆ ಪಡೆದು ಕೆಲಸ ಮಾಡಿದರೆ ತಿಂಗಳಿಗೆ 15,990 ರೂಪಾಯಿ ಸಿಗುತ್ತದೆ.
ಮೂರು ವರ್ಷ ಅನುಭವ ಆದ ಬಳಿಕ ತರಬೇತಿ ಕೆಲಸಗಾರ ಬಂಧಿ ಎಂದು ಪರಿಗಣಿಸಿ, ಆ ಕೈದಿಗೆ ದಿನಕ್ಕೆ 663 ರೂಪಾಯಿ ಸಂಬಳ ನಿಗದಿಪಡಿಸಲಾಗುತ್ತದೆ. ವಾರದ ರಜೆ ಪಡೆದು ಕೆಲಸ ಮಾಡಿದರೆ ಸಿಗುವ ತಿಂಗಳ ಸಂಬಳ 17,238 ರೂಪಾಯಿಯಾಗಿದೆ.