Home ಟಾಪ್ ಸುದ್ದಿಗಳು ಪ್ರತಿಪಕ್ಷ ನಾಯಕರ ಬಂಧನದ ಬಗ್ಗೆ ಪ್ರಧಾನಿ ಜೊತೆ ಮಾತನಾಡುತ್ತೇನೆ: ಶರದ್ ಪವಾರ್

ಪ್ರತಿಪಕ್ಷ ನಾಯಕರ ಬಂಧನದ ಬಗ್ಗೆ ಪ್ರಧಾನಿ ಜೊತೆ ಮಾತನಾಡುತ್ತೇನೆ: ಶರದ್ ಪವಾರ್

ನವದೆಹಲಿ: ಸಾಲಾಗಿ ಪ್ರತಿ ಪಕ್ಷ ನಾಯಕರ ಬಂಧನವು ಕೇಂದ್ರವು ಹೇಗೆ ತನ್ನ ತನಿಖಾ ಏಜೆನ್ಸಿಗಳನ್ನು ದುರುಪಯೋಗ ಮಾಡಿಕೊಳ್ಳುತ್ತದೆ ಎನ್ನುವುದಕ್ಕೆ ಉದಾಹರಣೆ, ಈ ವಿಷಯವನ್ನು ಪ್ರಧಾನಿಯವರನ್ನು ಕಂಡು ನೇರ ಮಾತನಾಡಲಿದ್ದೇನೆ ಎಂದು ಎನ್’ಸಿಪಿ ಮುಖ್ಯಸ್ಥ ಶರದ್ ಪವಾರ್ ಹೇಳಿದ್ದಾರೆ.

ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ- ಎನ್’ಸಿಪಿ  ನಾಯಕ ಅನಿಲ್ ದೇಶಮುಖ್ ಒಂದು ವರ್ಷದ ಜೈಲು ವಾಸದ ಬಳಿಕ ಬಿಡುಗಡೆಯಾದ ಸಂದರ್ಭದಲ್ಲಿ ಶರದ್ ಪವಾರ್ ಮಾತನಾಡಿದರು.

ಮಹಾರಾಷ್ಟ್ರದಲ್ಲಿ ಅನಿಲ್ ದೇಶಮುಖ್, ಶಿವಸೇನೆಯ ಸಂಜಯ್ ರಾವುತ್ ಅವರಂತಹ ನಾಯಕರ ಬಂಧನಕ್ಕೆ ಅಧಿಕಾರ ದುರುಪಯೋಗದ ಹೊರತಾಗಿ ಯಾವುದೇ ಬಲವಾದ ಕಾರಣಗಳು ಇರಲಿಲ್ಲ ಎಂದು ಅವರು ದೂರಿದರು.

“ಮುಂದಿನ ದಿನಗಳಲ್ಲಿಯೂ ಇದು ಮುಂದುವರಿಯಬಾರದು ಎನ್ನುವುದಕ್ಕಾಗಿ ನಾನು ಪ್ರಧಾನಿ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರನ್ನು ನೇರವಾಗಿ ಕಂಡು ಮಾತನಾಡಲಿದ್ದೇನೆ” ಎಂದು ಪವಾರ್ ಹೇಳಿದರು.

ಅನಿಲ್ ದೇಶಮುಖ್ ಅವರು ಉದ್ದವ್ ಠಾಕ್ರೆ ಸಂಪುಟದಲ್ಲಿ ಸಚಿವರಾಗಿದ್ದರು. ಆ ಸರಕಾರವನ್ನು ದುರ್ಬಲಗೊಳಿಸಲು ಅವರನ್ನು ಬಂಧಿಸಲಾಗಿತ್ತು. ಕೊನೆಗೆ ಜೂನ್ ತಿಂಗಳಲ್ಲಿ ಅಡ್ಡ ಹಾದಿಯಿಂದ ಬಿಜೆಪಿಯು ಶಿವಸೇನೆ- ಎನ್ ಸಿಪಿ- ಕಾಂಗ್ರೆಸ್ ಮೈತ್ರಿ ಸರಕಾರವನ್ನು ಉರುಳಿಸಿದೆ ಎಂದೂ ಅವರು ಆರೋಪಿಸಿದರು.

ಭ್ರಷ್ಟಾಚಾರ ಆರೋಪದ ಮೇಲೆ ದೇಶಮುಖ್’ರನ್ನು ಬಂಧಿಸಲಾಗಿತ್ತು. ಒಂದು ವರ್ಷದ ಬಳಿಕ ಅವರು ಜಾಮೀನು ಪಡೆದು ಹೊರ ಬಂದಿದ್ದಾರೆ. ಬಿಡುಗಡೆಯಾದ ದೇಶಮುಖ್ ಮನೆಗೆ ಹೋಗುವುದಕ್ಕೆ ಮೊದಲು ತೆರೆದ ಜೀಪಿನಲ್ಲಿ ವಿನಾಯಕ ಮಂದಿರಕ್ಕೆ ಭೇಟಿ ನೀಡಿದ ಶರದ್ ಪವಾರ್ ಅವರ ಜೊತೆ ಅವರ ಪುತ್ರಿ ಸಂಸದೆ ಸುಪ್ರಿಯಾ ಸುಳೆ ಇದ್ದರು.

ಇದಕ್ಕೆ ಮೊದಲು ಶಿವಸೇನೆ ನಾಯಕ ಸಂಜಯ್ ರಾವುತ್’ರನ್ನು ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಅವರು ಮೂರು ತಿಂಗಳು ಸೆರೆಮನೆಯಲ್ಲಿ ಕಳೆದು ನವೆಂಬರ್’ನಲ್ಲಿ ಜಾಮೀನಿನಲ್ಲಿ ಹೊರಗೆ ಬಂದಿದ್ದಾರೆ. ಅವರನ್ನು  ಬಂಧಿಸಿದ ಬಗ್ಗೆ ಜಾರಿ ನಿರ್ದೇಶನಾಲಯವನ್ನು ನ್ಯಾಯಾಲಯ ಕಠಿಣ ಶಬ್ದಗಳಿಂದ ಪ್ರಶ್ನಿಸಿತ್ತು.

ಅನಿಲ್ ದೇಶ್ ಮುಖ್ ಮತ್ತು ಸಂಜಯ್ ರಾವುತ್ ಅವರು ಇದು ಬಿಜೆಪಿಯ ದ್ವೇಷ ರಾಜಕೀಯವೇ ಹೊರತು ಆರೋಪಗಳಲ್ಲಿ ಹುರುಳಿಲ್ಲ ಎಂದು ಹೇಳಿದ್ದರು. 

ಮಹಾರಾಷ್ಟ್ರ ಮಾತ್ರವಲ್ಲ, ಜಾರ್ಖಂಡ್ ಹಾಗೂ ದೆಹಲಿ ಪ್ರತಿ ಪಕ್ಷಗಳ ನಾಯಕರು ಕೂಡ ಮೋದಿ ಮತ್ತು ಅಮಿತ್ ಶಾರ ಸರಕಾರದಲ್ಲಿ ಇಡಿ ಮತ್ತು ಸಿಬಿಐ ಪ್ರತಿಪಕ್ಷಗಳ ಮೇಲೆ ತೀವ್ರವಾಗಿ ದುರುಪಯೋಗ ಆಗುತ್ತಿದೆ ಎಂದು ಹೇಳಿದ್ದರು.

ಬಾಂಬೆ ಹೈ ಕೋರ್ಟಿನಲ್ಲಿ ಭ್ರಷ್ಟಾಚಾರ ಸಂಬಂಧ ಸಿಬಿಐ ದಾಖಲಿಸಿದ್ದ ಮೊಕದ್ದಮೆಗೆ ಸಂಬಂಧಿಸಿದಂತೆ ದೇಶಮುಖ್ ಅವರು ಜಾಮೀನು ಪಡೆದಿದ್ದಾರೆ. ತಾನು ಸುಪ್ರೀಂ ಕೋರ್ಟಿಗೆ ಹೋಗುವವರೆಗೆ 10 ದಿನ ಸಮಯಾವಕಾಶವನ್ನು ನೀಡುವಂತೆ ಸಿಬಿಐ ಮನವಿ ಮಾಡಿತ್ತು. ಆದರೆ ಸುಪ್ರೀಂ ಕೋರ್ಟು ಸಿಬಿಐ ಮೇಲ್ಮನವಿಯನ್ನು ಚಳಿಗಾಲದ ರಜೆಯ ಬಳಿಕ ಜನವರಿಯಲ್ಲಿ  ತೆಗೆದುಕೊಳ್ಳುವುದಾಗಿ ಹೇಳಿದ್ದರಿಂದ ಸದ್ಯ ದೇಶಮುಖ್ ಜಾಮೀನಿನಿಂದ ಬಿಡುಗಡೆ ಹೊಂದಿದ್ದಾರೆ.

Join Whatsapp
Exit mobile version